ಕೇಂದ್ರ ಸರ್ಕಾರಿ ನೌಕರರು ವಾರದಲ್ಲಿ ನಾಲ್ಕು ದಿನ ಕೆಲಸ ಮಾಡಲಿದ್ದು, ಉಳಿದ ಮೂರು ದಿನ ರಜೆ ನೀಡಲಾಗುವುದು ಎಂಬ ಸುದ್ದಿಯಿದೆ. ಈ ಬಗ್ಗೆ ಲೋಕಸಭೆಯಲ್ಲೂ ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆಗೆ ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಉತ್ತರ ನೀಡಿದ್ದಾರೆ.
ಕೇಂದ್ರ ಸರ್ಕಾರಿ ನೌಕರರ ಕೆಲಸದ ದಿನವನ್ನು ನಾಲ್ಕು ದಿನಕ್ಕೆ ಇಳಿಸುವ ಅಥವಾ ಕೆಲಸದ ಅವಧಿಯನ್ನು 40 ಗಂಟೆಗೆ ಇಳಿಸುವ ಯಾವುದೇ ಯೋಚನೆ ಸರ್ಕಾರಕ್ಕಿಲ್ಲವೆಂದು ಗಂಗ್ವಾರ್ ಹೇಳಿದ್ದಾರೆ. ಗಂಗ್ವಾರ್ ಲೋಕಭೆಯಲ್ಲಿ ಈ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ. ಕೇಂದ್ರ ಸರ್ಕಾರದ ಆಡಳಿತ ಕಚೇರಿಗಳಲ್ಲಿ, ಕೆಲಸದ ದಿನಗಳು, ರಜಾದಿನಗಳು, ಕೆಲಸದ ಸಮಯವನ್ನು ಕೇಂದ್ರ ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಜಾರಿಗೆ ತರಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ಸದ್ಯ ನಾಲ್ಕನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಕೇಂದ್ರ ಸರ್ಕಾರಿ ನೌಕರರಿಗೆ ಕೆಲಸದ ಸಮಯವನ್ನು ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರಿ ನೌಕರರು ವಾರದಲ್ಲಿ 5 ದಿನ ಕೆಲಸ ಮಾಡುತ್ತಾರೆ. ದಿನಕ್ಕೆ 8.30 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಉದ್ಯೋಗಿ ವಾರದಲ್ಲಿ 42.30 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ಏಳನೇ ವೇತನ ಆಯೋಗವೂ ಕೆಲಸದ ಸಮಯ ಮತ್ತು ಕೆಲಸದ ದಿನಗಳಿಗೆ ಸಂಬಂಧಿಸಿದಂತೆ ಹಿಂದಿನ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ಶಿಫಾರಸು ಮಾಡಿದೆ ಎಂದು ಸಚಿವರು ಹೇಳಿದ್ದಾರೆ.