ಭಾರತದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ರಾಜಸ್ತಾನದಲ್ಲಿ 75ನೇ ಸ್ವಾತಂತ್ರ್ಯ ದಿನದ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸಲಾಗಿದೆ. ಸುಮಾರು 1 ಕೋಟಿ ಶಾಲಾ ವಿದ್ಯಾರ್ಥಿಗಳು ಒಟ್ಟಿಗೆ ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ.
ಈ ಕಾರ್ಯಕ್ರಮಕ್ಕೆ ಆಜಾದಿ ಕಾ ಅಮೃತ್ ಮಹೋತ್ಸವ್ ಎಂದು ಹೆಸರಿಡಲಾಗಿದೆ. ರಾಜಸ್ತಾನದ ವಿವಿಧ ಜಿಲ್ಲೆಗಳ ಶಾಲಾ ಮಕ್ಕಳು ಬೆಳಗ್ಗೆ 10.15 ರಿಂದ 10.40ರವರೆಗೆ ದೇಶಭಕ್ತಿ ಗೀತೆಗಳನ್ನು ಹಾಡಿದ್ದಾರೆ. ಜೈಪುರದ ಸವಾಯಿ ಮಾನ್‌ಸಿಂಗ್ ಮೈದಾನದಲ್ಲಿ ಸಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇಲ್ಲಿ 26,000 ವಿದ್ಯಾರ್ಥಿಗಳು ಹಾಜರಿದ್ದರು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ವಿದ್ಯಾರ್ಥಿಗಳ ಈ ಪ್ರಯತ್ನ ವಿಶ್ವ ದಾಖಲೆಯ ಪುಸ್ತಕದಲ್ಲಿ ನಮೂದಾಗಿದೆ. ಈ ಹಾಡುಗಾರಿಕೆಯ ಕಾರ್ಯಕ್ರಮದಲ್ಲಿ ಒಟ್ಟು 60 ಸಾವಿರ ಸರ್ಕಾರಿ ಹಾಗೂ 57 ಸಾವಿರ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. 9 ರಿಂದ 12ನೇ ತರಗತಿವರೆಗಿನ ಸುಮಾರು 1 ಕೋಟಿ ವಿದ್ಯಾರ್ಥಿಗಳು ಒಟ್ಟಿಗೆ 25 ನಿಮಿಷಗಳ ಕಾಲ 6 ದೇಶಭಕ್ತಿ ಗೀತೆಗಳನ್ನು ಹಾಡಿದ್ದಾರೆ.