ಜೀವನೋತ್ಸಾಹ ಬಲವಾಗಿದ್ದರೆ ವಯಸ್ಸು ಎನ್ನುವುದು ಕೇವಲ ಒಂದು ಸಂಖ್ಯೆ ಎಂದು ಸಾರಿ ಹೇಳುವ ಹಿರಿಯ ಮಹಿಳೆಯೊಬ್ಬರು ತರುಣ, ತರುಣಿಯರೂ ನಾಚುವಂತೆ ಸಕ್ರಿಯ ಜೀವನ ಸಾಗಿಸುತ್ತಿದ್ದಾರೆ.
ಜ್ಯೋತ್ಸ್ನಾ ಕಾಗಲ್ ಹೆಸರಿನ ಈ ಹಿರಿಯ ಮಹಿಳೆಗೆ ಈಗ 74ರ ಹರೆಯ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಬಳಿ ಬಂಕಿಕೊಡ್ಲ ಗ್ರಾಮದಲ್ಲಿ ಬೆಳೆದ ಜ್ಯೋತ್ಸ್ನಾ, ಬಾಲ್ಯದಿಂದಲೂ ಬೈಸಿಕಲ್‌ಗಳನ್ನು ಇಷ್ಟ ಪಡುತ್ತಿದ್ದರು. ತಮ್ಮ 14ನೇ ವಯಸ್ಸಿನಲ್ಲಿ ಅಕ್ಕಪಕ್ಕದ ಮನೆಯವರಿಂದ ಬೈಸಿಕಲ್ ಪಡೆದ ಜ್ಯೋತ್ಸ್ನಾ ಬೈಸಿಕಲ್ ಸವಾರಿ ಕಲಿತರು.
ಪೆಡಲ್ ತುಳಿಯುವುದರ ಮೇಲಿನ ಜ್ಯೋತ್ಸ್ನಾ ಕಾಗಲ್‌ರ ಪ್ರೀತಿ ಈಗಲೂ ಸಹ ಅದೇ ಮಟ್ಟದಲ್ಲಿದೆ. ತಮ್ಮಂತೆಯೇ ಬೈಸಿಕಲ್ ತುಳಿಯುವುದನ್ನು ಕಲಿಯಲು ಮಕ್ಕಳಿಗೆ ಪ್ರೇರಣೆಯಾಗಿದ್ದಾರೆ ಜ್ಯೋತ್ಸ್ನಾ. ಆರಂಭದಲ್ಲಿ ಹುಡುಗಿಯರ ಬೈಸಿಕಲ್ ಸಿಗದೇ ಇದ್ದ ಕಾರಣ ಹುಡುಗರ ಬೈಸಿಕಲ್‌ನಲ್ಲೇ ಸವಾರಿ ಕಲಿತರು ಜ್ಯೋತ್ಸ್ನಾ.
1968ರಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಆರಂಭಿಸಿದ ವೇಳೆ ತಮ್ಮ ಮೊದಲ ಬೈಸಿಕಲ್ ಖರೀದಿ ಮಾಡಿದ ಜ್ಯೋತ್ಸ್ನಾ ಕಾಗಲ್, 1988ರಲ್ಲಿ ಮತ್ತೊಂದು ಬೈಸಿಕಲ್ ಕೊಂಡರು. 1976ರಲ್ಲಿ ತಮ್ಮ ಬೈಸಿಕಲ್‌ನಲ್ಲಿ ಕಳ್ಳನೊಬ್ಬನನ್ನು ಅಟ್ಟಿಸಿಕೊಂಡು ಹೋಗಿ ಹಿಡಿದಿದ್ದರು ಜ್ಯೋತ್ಸ್ನಾ ಕಾಗಲ್. ಸೀರೆಯುಟ್ಟುಕೊಂಡೇ ಬೈಸಿಕಲ್ ಮೇಲೆ ಲೀಲಾಜಾಲವಾಗಿ ಸವಾರಿ ಮಾಡುತ್ತಾರೆ ಜ್ಯೋತ್ಸ್ನಾ ಕಾಗಲ್.