ಇಡೀ ಜಗತ್ತೇ ಐಪಿಎಲ್ ಎಂಜಾಯ್ ಮಾಡ್ತಿದ್ರೆ ಅತ್ತ ಶ್ರೀಲಂಕಾದ ಬೌಲರ್ ಒಬ್ಬರು ಕ್ರಿಕೆಟ್ ಲೋಕದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ವಿಶ್ವದಾಖಲೆ ನಿರ್ಮಿಸಿರುವ ಈ ಆಟಗಾರ ಕೇವಲ 7 ಟೆಸ್ಟ್ ಪಂದ್ಯಗಳಲ್ಲಿ 50 ವಿಕೆಟ್ ಪಡೆದಿದ್ದಾರೆ. ಶ್ರೀಲಂಕಾ ಮತ್ತು ಐರ್ಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಈ ಅಮೋಘ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನ 71 ವರ್ಷಗಳ ಹಳೆಯ ದಾಖಲೆಯನ್ನೂ ಮುರಿದಿದ್ದಾರೆ.
ಶ್ರೀಲಂಕಾದ ಸ್ಪಿನ್ನರ್ ಪ್ರಭಾತ್ ಜಯಸೂರ್ಯ, ಐರ್ಲೆಂಡ್ ವಿರುದ್ಧ ಗಾಲೆಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ 71 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಮುರಿದು ಇತಿಹಾಸ ನಿರ್ಮಿಸಿದ್ದಾರೆ. ಪ್ರಭಾತ್ ಜಯಸೂರ್ಯ, ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 50 ವಿಕೆಟ್ ಪೂರೈಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ 50 ವಿಕೆಟ್ ಪಡೆದ ಸ್ಪಿನ್ನರ್ ಎನಿಸಿಕೊಂಡಿದ್ದಾರೆ. ಪ್ರಭಾತ್ ಜಯಸೂರ್ಯ ಅವರು 7 ಪಂದ್ಯಗಳಲ್ಲಿ 50 ವಿಕೆಟ್‌ಗಳ ಸಂಖ್ಯೆಯನ್ನು ಮುಟ್ಟುವ ಮೂಲಕ ವೆಸ್ಟ್ ಇಂಡೀಸ್ ಮಾಜಿ ಬೌಲರ್ ಆಲ್ಫ್ ವ್ಯಾಲೆಂಟೈನ್ ಅವರನ್ನು ಹಿಂದಿಕ್ಕಿದ್ದಾರೆ.
71 ವರ್ಷಗಳ ಹಿಂದೆ ಆಲ್ಫ್ ವ್ಯಾಲೆಂಟೈನ್ ತಮ್ಮ 8ನೇ ಟೆಸ್ಟ್ ನಲ್ಲಿ 50 ವಿಕೆಟ್ ಗಳಿಸಿದ್ದರು. 31 ವರ್ಷದ ಪ್ರಭಾತ್ ಜಯಸೂರ್ಯ, ಜುಲೈ 2022 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ತಮ್ಮ ಚೊಚ್ಚಲ ಪಂದ್ಯದಲ್ಲೇ 12 ವಿಕೆಟ್‌ಗಳನ್ನು ಕಬಳಿಸಿದ್ದರು.
ಇದೀಗ ಐರ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಜಯಸೂರ್ಯ 5 ವಿಕೆಟ್ ಪಡೆದಿದ್ದಾರೆ. ಆಸ್ಟ್ರೇಲಿಯಾದ ವೇಗದ ಬೌಲರ್ ಚಾರ್ಲಿ ಟರ್ನರ್, ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 50 ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದಾರೆ. ಅವರು 1888 ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಆರನೇ ಟೆಸ್ಟ್ ಪಂದ್ಯದಲ್ಲಿ 50 ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿದ ದಾಖಲೆ ಮಾಡಿದ್ದರು.