ರೈಲು ಹಳಿ ಮೇಲೆ ಮರ ಬಿದ್ದ ವೇಳೆ ಸಮಯ ಪ್ರಜ್ಞೆ ಮೆರೆದ 70 ವರ್ಷದ ವೃದ್ಧೆಯೊಬ್ಬರು ಮನೆಯಲ್ಲಿದ್ದ ಕೆಂಪು ಬಟ್ಟೆ ತೆಗೆದುಕೊಂಡು ಬಂದು ಅದನ್ನು ತೋರಿಸುವ ಮೂಲಕ ಈ ಮಾರ್ಗದಲ್ಲಿ ಬರುತ್ತಿದ್ದ ರೈಲನ್ನು ನಿಲ್ಲಿಸಿ ದುರಂತ ತಪ್ಪಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಂಗಳೂರು ಹೊರವಲಯದ ಪಚ್ಛನಾಡಿ ಸಮೀಪ ಮಾರ್ಚ್ 21ರಂದು ಈ ಘಟನೆ ನಡೆದಿದ್ದು, ಮಂದಾರ ನಿವಾಸಿ ಚಂದ್ರಾವತಿ ಎಂಬವರು ದುರಂತ ತಪ್ಪಿಸಿದ ಮಹಿಳೆಯಾಗಿದ್ದಾರೆ.
ಮಾರ್ಚ್ 21ರಂದು ಇವರು ಮನೆಯಲ್ಲಿದ್ದ ವೇಳೆ ಮಧ್ಯಾಹ್ನ 2-10 ರ ಸುಮಾರಿಗೆ ಮರ ಬಿದ್ದ ಶಬ್ದ ಕೇಳಿ ಬಂದಿದೆ. ಹೊರ ಬಂದು ನೋಡಿದಾಗ ಹಳಿಯ ಮೇಲೆ ಮರ ಬಿದ್ದಿರುವುದು ಕಂಡುಬಂದಿದ್ದು, ಇದೇ ಸಂದರ್ಭದಲ್ಲಿ ಮಂಗಳೂರು – ಮುಂಬೈ ನಡುವಿನ ಮತ್ಸ್ಯಗಂಧ ರೈಲು ಆಗಮಿಸುತ್ತಿತ್ತು.
ಕೂಡಲೇ ಸಮಯ ಪ್ರಜ್ಞೆ ಮೆರೆದ ಅವರು ಮನೆಯೊಳಗೆ ಓಡಿಹೋಗಿ ಕೆಂಪು ವಸ್ತ್ರ ಹಿಡಿದುಕೊಂಡು ಬಂದು ಹಳಿ ಮೇಲೆ ಒಂದಷ್ಟು ದೂರ ಓಡಿದ್ದಾರೆ. ಇದನ್ನು ಗಮನಿಸಿದ ಲೋಕೋ ಪೈಲೆಟ್ ಕೂಡಲೇ ರೈಲು ನಿಲ್ಲಿಸಿದ್ದು, ಬಳಿಕ ಸ್ಥಳೀಯರ ನೆರವಿನಿಂದ ಮರವನ್ನು ತೆರವುಗೊಳಿಸಲಾಗಿದೆ. ಚಂದ್ರಾವತಿ ಅವರ ಕಾರ್ಯವನ್ನು ಈಗ ಎಲ್ಲರೂ ಶ್ಲಾಘಿಸುತ್ತಿದ್ದಾರೆ.