ಕೊರೊನಾ ಹೆಮ್ಮಾರಿ ರಾಜ್ಯ ಹಾಗೂ ರಾಷ್ಟ್ರಕ್ಕೆ ಕಾಲಿಟ್ಟಾಗಿನಿಂದ ಸಾಕಷ್ಟು ಅವಾಂತರಗಳೇ ಸೃಷ್ಟಿಯಾಗಿವೆ. ಬಡವರು ಬದುಕಲು ಹೆಣಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವರದಿಯೊಂದರ ಪ್ರಕಾರ ರಾಜ್ಯದ ಶೇ.70ರಷ್ಟು ವಿದ್ಯಾರ್ಥಿಗಳು ಓದಿನಿಂದ ಹಿಮ್ಮುಖವಾಗಿದ್ದಾರೆ ಎಂದು ತಿಳಿದು ಬಂದಿದೆ.
ಕೊರೊನಾದಿಂದಾಗಿ ಸೃಷ್ಟಿಯಾಗಿರುವ ಲಾಕ್ ಡೌನ್, ಶಾಲೆ ಮುಚ್ಚಿದ್ದರಿಂದಾಗಿ ಶೇ.70ರಷ್ಟು ವಿದ್ಯಾರ್ಥಿಗಳು ಆನ್ ಲೈನ್ ಸೇರಿದಂತೆ ಇನ್ನಿತರ ಯಾವುದೇ ರೀತಿಯ ಕಲಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲ ಎಂದು ಮಕ್ಕಳ ಪರಿಸ್ಥಿತಿ ಕುರಿತು ನಡೆದ ಅಧ್ಯಯನ ವರದಿಯಲ್ಲಿ ಕಂಡು ಬಂದಿದೆ.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಎಚ್.ಸಿ. ರಾಘವೇಂದ್ರ ಈ ವರದಿಯನ್ನು ಬಿಡುಗಡೆ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಕೇವಲ ಶೇ.30ರಷ್ಟು ವಿದ್ಯಾರ್ಥಿಗಳು ಮಾತ್ರ ಆನ್ ಲೈನ್ ನಲ್ಲಿ ಶಿಕ್ಷಣ ಪಡೆದಿದ್ದಾರೆ ಎಂದು ವರದಿ ಹೇಳಿದೆ.
ರಾಜ್ಯದಲ್ಲಿನ 20 ಜಿಲ್ಲೆಗಳ ತಲಾ ಎರಡು ಪ್ರದೇಶ, ಗ್ರಾಮಗಳು, ಮಹಿಳೆಯರು, ವಯಸ್ಕರರು ಸೇರಿದಂತೆ 47 ಕೇಂದ್ರೀಕೃತ ಗುಂಪುಗಳಿಂದ ಈ ಅಧ್ಯಯನ ನಡೆಸಲಾಗಿತ್ತು. ಬಿಸಿಯೂಟ ಸೇರಿದಂತೆ ಸರ್ಕಾರದ ಯೋಜನೆಯ ಆಹಾರ ಸಿಗದ ಕಾರಣ ಹಲವು ವಿದ್ಯಾರ್ಥಿಗಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.
ಕೆಲಸವಿಲ್ಲದೆ ಹಾಗೂ ಹಣ ಇಲ್ಲದ ಕಾರಣ ಶೇ.35ರಷ್ಟು ಪಾಲಕರು ಮರಳಿ ತಮ್ಮ ಊರುಗಳಿಗೆ ತೆರಳಿದ್ದಾರೆ. ಬಾಲ್ಯ ವಿವಾಹ ನಡೆದಿವೆ. ಹಲವಾರು ಮಕ್ಕಳು ಅನಾಥವಾಗಿದ್ದಾರೆ. ಹಲವು ಮಕ್ಕಳು ಹಣಕಾಸಿನ ತೊಂದರೆಯಿಂದಾಗಿ ದುಡಿಮೆಗೆ ಇಳಿದಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.