ಯುವಜನತೆ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂಬ ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣಮೂರ್ತಿ ಅವರ ಹೇಳಿಕೆ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಕೆಲಸದ ಉತ್ಪಾದಕತೆಯನ್ನು ಸುಧಾರಿಸದೇ ಇದ್ದಲ್ಲಿ ಹೆಚ್ಚು ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ಸ್ಪರ್ಧಿಸಲು ನಮಗೆ ಸಾಧ್ಯವಾಗುವುದಿಲ್ಲ ಎಂಬ ಮೂರ್ತಿಯವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ನಾರಾಯಣಮೂರ್ತಿ ಅವರ ಹೇಳಿಕೆ ಅನೇಕ ಪ್ರಶ್ನೆಗಳನ್ನು ಸಹ ಹುಟ್ಟುಹಾಕಿದೆ.
ವಾರದ ಏಳು ದಿನಗಳ ಪೈಕಿ ಒಂದು ದಿನ ರಜೆಯನ್ನು ಪರಿಗಣಿಸಿದರೆ ಉಳಿದ 6 ದಿನಗಳಲ್ಲಿ ಪ್ರತಿದಿನ ಸುಮಾರು 11.5 ಗಂಟೆಗಳ ಕಾಲ ಉದ್ಯೋಗಿಗಳು ಕೆಲಸ ಮಾಡಬೇಕಾಗುತ್ತದೆ. ದಿನಕ್ಕೆ ಐದು ದಿನ ಮಾತ್ರ ಕೆಲಸ ಮಾಡುವ ಮತ್ತು ಶನಿವಾರ- ಭಾನುವಾರ ರಜೆ ಪಡೆಯುವವರು 70 ಗಂಟೆಗಳ ಕೆಲಸವನ್ನು ಪೂರ್ಣಗೊಳಿಸಲು 5 ದಿನಗಳ ಕಾಲ ದಿನಕ್ಕೆ 14 ಗಂಟೆ ಕೆಲಸ ಮಾಡಬೇಕಾಗುತ್ತದೆ. ಒಬ್ಬ ವ್ಯಕ್ತಿಯು ವಾರದ ಏಳೂ ದಿನ ಕೆಲಸ ಮಾಡಿದರೆ ಪ್ರತಿದಿನ 10 ಗಂಟೆ ದುಡಿಯಲೇಬೇಕು.
ಇಲ್ಲಿ ಕಾಡುವ ಪ್ರಮುಖ ಪ್ರಶ್ನೆ ಉದ್ಯೋಗಿಗಳ ಹಕ್ಕುಗಳಿಗೆ ಸಂಬಂಧಿಸಿದ್ದು. ಉದ್ಯೋಗಿ 8 ಗಂಟೆಗಳಿಗಿಂತ ಹೆಚ್ಚು ಕಾಲ ಕಚೇರಿಯಲ್ಲಿ ಕಳೆದರೆ ಹೆಚ್ಚುವರಿ ಸಂಬಳ ಮತ್ತು ಹೆಚ್ಚಿನ ಸೌಲಭ್ಯಗಳನ್ನು ನೀಡಲಾಗುತ್ತದೆಯೇ ? ಅಥವಾ ಸಂಬಳದಲ್ಲಿ ಯಾವುದೇ ಹೆಚ್ಚಳವಿಲ್ಲದೆ ಅವರು ಹೆಚ್ಚಿನ ಸೇವೆ ಮಾಡಬೇಕೇ ಎಂಬುದು ಪ್ರಶ್ನೆ. ಈ ರೀತಿ ದಿನವಿಡೀ ಕೆಲಸದ ಒತ್ತಡದಲ್ಲಿಯೇ ಇದ್ದರೆ ಉದ್ಯೋಗಿಯ ವೈಯಕ್ತಿಕ ಜೀವನ ಮತ್ತು ಕುಟುಂಬದ ಸ್ಥಿತಿ ಏನಾಗುತ್ತದೆ ? ಕಂಪನಿಗಾಗಿ ಆತ ತನ್ನ ಕುಟುಂಬ ಮತ್ತು ವೈಯಕ್ತಿಕ ಜೀವನವನ್ನು ತ್ಯಾಗ ಮಾಡಬೇಕೆ ಎಂಬ ಪ್ರಶ್ನೆ ಕೂಡ ಮೂಡುತ್ತದೆ.
ಅನೇಕ ದೇಶಗಳಲ್ಲಿದೆ ವಾರದಲ್ಲಿ ಕೇವಲ 4 ದಿನ ಕೆಲಸ
ಐರ್ಲೆಂಡ್, ಸ್ಪೇನ್ ಮತ್ತು ಬ್ರಿಟನ್ ಸೇರಿದಂತೆ ಅನೇಕ ದೇಶಗಳಲ್ಲಿ ವಾರಕ್ಕೆ ಕೇವಲ 4 ದಿನ ಕೆಲಸದ ಪ್ರವೃತ್ತಿಯಿದೆ. ಅದರ ಫಲಿತಾಂಶಗಳು ಸಹ ಉತ್ತಮವಾಗಿವೆ. ಪ್ರಾಯೋಗಿಕವಾಗಿ ಇದನ್ನು ಆರಂಭಿಸಲಾಗಿತ್ತು. ಪರಿಣಾಮ ಕೆಲಸದಲ್ಲಿನ ಉತ್ಪಾದಕತೆ, ನೈತಿಕತೆ ಮತ್ತು ತಂಡದ ಸಂಸ್ಕೃತಿ ಸುಧಾರಿಸಿದೆ ಎನ್ನುತ್ತವೆ ಈ ದೇಶಗಳು. ಉದ್ಯೋಗಿಗಳು ಹೆಚ್ಚು ವೈಯಕ್ತಿಕ ಸಮಯವನ್ನು ಕಳೆಯುವುದರಿಂದ ಆಯಾಸ ಕಡಿಮೆಯಾಗಿ ಜೀವನ ತೃಪ್ತಿ ಹೆಚ್ಚುತ್ತದೆ. ಯಾವುದೇ ದೇಶವು ವಾರದಲ್ಲಿ 4 ದಿನಗಳ ಕೆಲಸವನ್ನು ಸಂಪೂರ್ಣ ಅಳವಡಿಸಿಕೊಂಡಿಲ್ಲ. ಈ ನಿಯಮ ಪ್ರಾಯೋಗಿಕ ಹಂತದಲ್ಲಿದೆ. ದಕ್ಷಿಣ ಆಫ್ರಿಕಾ, ಬೆಲ್ಜಿಯಂ, ಐಸ್ಲ್ಯಾಂಡ್ ಮತ್ತು ಜಪಾನ್ ವಾರದಲ್ಲಿ ಕೇವಲ ನಾಲ್ಕು ದಿನ ಕೆಲಸ ಮಾಡುವ ನಿಯಮದ ಬಗ್ಗೆ ಪ್ರಯೋಗ ನಡೆಸುತ್ತಿವೆ.