
ಚೀನಾದಂತಹ ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ಭಾರತ ಸ್ಪರ್ಧಿಸಲು ಸಹಾಯ ಮಾಡಲು ದೇಶದ ಯುವಸಮೂಹ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಇತ್ತೀಚಿಗೆ ಇನ್ಫೋಸಿಸ್ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಹೇಳಿದ್ದರು. ಇನ್ಫೋಸಿಸ್ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ರೊಂದಿಗೆ ನಡೆದ ಯೂಟ್ಯೂಬ್ ಶೋನಲ್ಲಿ ಈ ರೀತಿ ಸಲಹೆ ನೀಡಿದ್ದ ಎನ್‌ಆರ್ ನಾರಾಯಣ ಮೂರ್ತಿ ಅವರ ಮಾತು ಭಾರೀ ವೈರಲ್ ಆಗಿ ಪರ-ವಿರೋಧ ಚರ್ಚೆ ಹುಟ್ಟುಹಾಕಿತು.
ಕಾರ್ಯಕ್ರಮ ಪ್ರಸಾರವಾಗ್ತಿದ್ದಂತೆ, ಭಾರತದಲ್ಲಿನ ಐಟಿ ಕಂಪನಿಗಳು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಿಸಿಕೊಂಡ್ರೂ ಹಲವು ವರ್ಷಗಳ ಕಾಲ ಸಂಬಳ ಮಾತ್ರ ಅಷ್ಟೇ ಇರುತ್ತದೆ ಎಂದು ನೆಟ್ಟಿಗರು ಟೀಕಿಸಿದ್ದರು. ನಾರಾಯಣ ಮೂರ್ತಿಯವರು ಹೇಳಿದಂತೆ ವಾರದಲ್ಲಿ 5 ದಿನ ಕೆಲಸದ ದಿನಗಳಿರುವ ಐಟಿ ಕಂಪನಿಗಳಲ್ಲಿ ವಾರಕ್ಕೆ 70 ಗಂಟೆ ಕೆಲಸ ಮಾಡಿದರೆ ಯಾವೆಲ್ಲಾ ರೀತಿಯ ಸಮಸ್ಯೆಗಳಾಗುತ್ತವೆ ಎಂಬುದರ ಬಗ್ಗೆಯೂ ಇಂಟರ್ನೆಟ್ ನಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ನಡುವೆ ಅತ್ಯುತ್ತಮ ಟಾಪ್ ಟೆಕ್ ಕಂಪನಿಗಳಲ್ಲಿ ಕೆಲಸದ ಅವಧಿ ಎಷ್ಟಿದೆ ಎಂದು ಗಮನಿಸಿದರೆ, ಫೋರ್ಬ್ಸ್ ವಿಶ್ವದ ಅತ್ಯುತ್ತಮ ಉದ್ಯೋಗದಾತರ ವರದಿಯ ಪ್ರಕಾರ 2023 ರ 15 ಅತ್ಯುತ್ತಮ ಟೆಕ್ ಕಂಪನಿಗಳು ಉದ್ಯೋಗಿಗಳಿಗೆ ವಾರಕ್ಕೆ 45 ಗಂಟೆಗಳ ಗರಿಷ್ಠ ಅಧಿಕೃತ ಕೆಲಸದ ಸಮಯವನ್ನು ಕಡ್ಡಾಯಗೊಳಿಸಿದೆ.
ಫೋರ್ಬ್ಸ್ ಪ್ರಕಾರ ವಿಶ್ವದ ಟಾಪ್ 15 ಟೆಕ್ ಕಂಪನಿಗಳಲ್ಲಿನ ಕೆಲಸದ ಅವಧಿ
01. ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್: ಅಧಿಕೃತ ಕೆಲಸದ ಸಮಯ ವಾರಕ್ಕೆ 45 ಗಂಟೆಗಳು.
02. ಮೈಕ್ರೋಸಾಫ್ಟ್: ಕನಿಷ್ಠ ಅವಶ್ಯಕತೆಯು ವಾರಕ್ಕೆ ಸುಮಾರು 40 ಗಂಟೆಗಳು.
03. ಆಲ್ಫಬೆಟ್: ದಿನಕ್ಕೆ 8 ಗಂಟೆಗಳು ಮತ್ತು ವಾರಕ್ಕೆ 40 ಗಂಟೆಗಳು.
04. ಆಪಲ್ : ದಿನಕ್ಕೆ 8 ಗಂಟೆಗಳು ಮತ್ತು ವಾರಕ್ಕೆ 40 ಗಂಟೆಗಳು.
05. ಐಬಿಎಂ: ದಿನಕ್ಕೆ 8 ಗಂಟೆಗಳು.
06. ಅಡೋಬ್: ದಿನಕ್ಕೆ 8 ಗಂಟೆಗಳು ಮತ್ತು ವಾರಕ್ಕೆ 40 ಗಂಟೆಗಳು.
07. ಸಿಸ್ಕೊ ಸಿಸ್ಟಮ್ಸ್: ಓಟಿ ಸೇರಿದಂತೆ ವಾರಕ್ಕೆ ಗರಿಷ್ಠ 60 ಗಂಟೆ.
08. ಡೆಲ್ ಟೆಕ್ನಾಲಜೀಸ್: ದಿನಕ್ಕೆ 8 ಗಂಟೆಗಳು ಮತ್ತು ವಾರಕ್ಕೆ 40 ಗಂಟೆಗಳು.
09. ಪೇಪಲ್: ದಿನಕ್ಕೆ 8 ಗಂಟೆಗಳು. ಆದಾಗ್ಯೂ ಕೆಲವು ಉದ್ಯೋಗಿಗಳು ದಿನಕ್ಕೆ ಸುಮಾರು 9 ಗಂಟೆಗಳ ಕಾಲ ಕೆಲಸ ಮಾಡುವುದು ವಾಡಿಕೆ.
10. ಸೋನಿ: ದಿನಕ್ಕೆ 9 ಗಂಟೆಗಳು ಮತ್ತು ವಾರಕ್ಕೆ 45 ಗಂಟೆಗಳು.
11. ಇಂಟೆಲ್: ವಾರಕ್ಕೆ ಕನಿಷ್ಠ 40 ಗಂಟೆಗಳು.
12. ಸೀಮೆನ್ಸ್: ಅವಶ್ಯಕತೆಗೆ ಅನುಗುಣವಾಗಿ ವಾರಕ್ಕೆ 40 ರಿಂದ 50 ಗಂಟೆಗಳ ನಡುವೆ.
13. ಅಮೆಜಾನ್: ವಾರಕ್ಕೆ ಕನಿಷ್ಠ 40 ಗಂಟೆಗಳು.
14. ನೆಟ್‌ಫ್ಲಿಕ್ಸ್: 8 ಗಂಟೆಗಳು ಅಥವಾ ಅಥವಾ ಅದಕ್ಕಿಂತ ಕಡಿಮೆ.
15. ಒರಾಕಲ್: ವಾರಕ್ಕೆ ಕನಿಷ್ಠ 20 ಗಂಟೆಗಳ ಅವಶ್ಯಕತೆಯೊಂದಿಗೆ 8 ಗಂಟೆಗಳು ಅಥವಾ ಅದಕ್ಕಿಂತ ಕಡಿಮೆ.