ಕರ್ನಾಟಕ – ತಮಿಳುನಾಡು ಗಡಿ ಭಾಗದಲ್ಲಿ 70ಕ್ಕೂ ಅಧಿಕ ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ತಮಿಳುನಾಡು ಹೊಸೂರಿನ ಶಾನಮಾನು ಅರಣ್ಯ ಪ್ರದೇಶದಲ್ಲಿ ಈ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು ಕಾಡಂಚಿನ ಪ್ರದೇಶದ ಜನರಲ್ಲಿ ಆತಂಕ ಮನೆ ಮಾಡಿದೆ.
ಈ ಆನೆಗಳ ಹಿಂಡು, ತಮಿಳುನಾಡಿನ ಶಾನಮಾವು, ಹಳಿಯಾಳ, ಬೂದೂರು, ರಾಮಾಪುರ, ಬಿರ್ಜೆಪಲ್ಲಿ ಸೇರಿದಂತೆ ವಿವಿಧ ಗ್ರಾಮಗಳ ಕೃಷಿ ಜಮೀನುಗಳಿಗೆ ನುಗ್ಗಿ ರಾಗಿ, ಭತ್ತ ಮೊದಲಾದ ಬೆಳೆಗಳನ್ನು ತುಳಿದು ಹಾಕಿದ್ದು, ರೈತರು ಅಪಾರ ನಷ್ಟ ಅನುಭವಿಸುವಂತಾಗಿದೆ.
ಈ ಆನೆಗಳ ಹಿಂಡಿನ ಪೈಕಿ ಕೆಲವೊಂದು ಆನೆಗಳು ಆನೇಕಲ್ ಭಾಗದ ಅರಣ್ಯದಲ್ಲಿ ಕಂಡು ಬಂದಿದ್ದು, ಇವುಗಳು ಗ್ರಾಮಗಳತ್ತ ನುಗ್ಗದಂತೆ ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚರಿಕೆ ವಹಿಸಿದ್ದಾರೆ. ಅಲ್ಲದೆ ಮೇಕೆ, ಕುರಿ, ದನ ಮೇಯಿಸಲು ಗ್ರಾಮಸ್ಥರು ಕಾಡಿಗೆ ಒಂಟಿಯಾಗಿ ಹೋಗಬಾರದು ಎಂದು ಸೂಚನೆ ನೀಡಲಾಗಿದೆ.