ಮೈಸೂರು: ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ತಾರಕಕ್ಕೇರಿದ್ದು, ಆಡಳಿತ ಹಾಗೂ ವಿಪಕ್ಷಗಳ ವಾಕ್ಸಮರಕ್ಕೆ ಕಾರಣವಾಗಿದೆ. 70 ಜನ ಕೂಗಿದ ಮಾತ್ರಕ್ಕೆ ಅದನ್ನು ಜನಾಕ್ರೋಶ ಎಂದು ಬಿಂಬಿಸುವ ಅಗತ್ಯವಿಲ್ಲ. ಹೋರಾಟ, ಪ್ರತಿಭಟನೆಗಳ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿ.ಟಿ. ರವಿ, ಆರ್.ಎಸ್.ಎಸ್. ನೂರಾರು ವಿದ್ಯಾ ಸಂಸ್ಥೆಗಳನ್ನು ಕಟ್ಟಿದೆ. ಶುಲ್ಕವಿಲ್ಲದೆ ಕೆಲವೆಡೆ ಶಿಕ್ಷಣ ಕೊಡುತ್ತಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರಿಗೆ, ಸಿದ್ದರಾಮಯ್ಯನವರಿಗೆ ಕಾಣುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣೆಯಾಗಲಿ, ಯಾವುದೇ ವಿಚಾರವಾಗಲಿ, ಯಾರೋ 70 ಜನ ಕೂಗಿದ ಮಾತ್ರಕ್ಕೆ ಸರ್ಕಾರದ ವಿರುದ್ಧ ಜನಾಕ್ರೋಶ ಎನ್ನಲಾಗುತ್ತಾ ? ಇದೆಲ್ಲವೂ ಟೂಲ್ ಕಿಟ್ ರಾಜಕಾರಣದ ಒಂದು ಭಾಗವಷ್ಟೇ ಎಂದು ಕಿಡಿಕಾರಿದರು.
ಇನ್ನು ಆರ್.ಎಸ್.ಎಸ್. ಬಗ್ಗೆ ಸಿದ್ದರಾಮಯ್ಯನವರ ಸರ್ಟಿಫಿಕೇಟ್ ಅಗತ್ಯವಿಲ್ಲ. ಆರ್.ಎಸ್.ಎಸ್. ದೇಶಭಕ್ತ ಸಂಘಟನೆ ಎಂಬುದನ್ನು ದೇಶದ ಜನರು ಈಗಾಗಲೇ ಒಪ್ಪಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಗಲಿದೆ ಎಂದು ಹೇಳಿದರು.