ಆಂಧ್ರಪ್ರದೇಶ :ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ದರ್ಶಿ ಬಳಿ ನಾಗಾರ್ಜುನ ಸಾಗರ್ ಕಾಲುವೆಗೆ ಮದುವೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಏಳು ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಎಪಿಎಸ್ಆರ್ಟಿಸಿಗೆ ಸೇರಿದ ಬಸ್ ಮದುವೆಗಾಗಿ ಕಾಕಿನಾಡಕ್ಕೆ ಹೋಗುವಾಗ ತಡರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಡಿಕ್ಕಿ ಹೊಡೆದ ಪರಿಣಾಮ ಕಾಲುವೆಗೆ ಉರುಳಿ ಬಿದ್ದಿದೆ. ಘಟನೆಯಲ್ಲಿ 6 ವರ್ಷದ ಮಗು ಸೇರಿ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 12 ಜನರು ಗಾಯಗೊಂಡಿದ್ದಾರೆ.
ಪ್ರಕಾಶಂ ಜಿಲ್ಲೆಯ ಪೊಡಿಲಿಯ ಕೆಲವರು ಕಾಕಿನಾಡದಲ್ಲಿ ನಡೆದ ವಿವಾಹ ಆರತಕ್ಷತೆಗಾಗಿ ಆರ್ಟಿಸಿ ಬಸ್ ಅನ್ನು ಬಾಡಿಗೆಗೆ ಪಡೆದಿದ್ದರು. ಬಸ್ ನಿಯಂತ್ರಣ ಕಳೆದುಕೊಂಡು ಕಾಲುವೆಗೆ ಬಿದ್ದಿದೆ. ಮೃತರನ್ನು ಅಬ್ದುಲ್ ಅಜೀಜ್, ಅಬ್ದುಲ್ ಹನಿ, ಶೇಖ್ ರಮೀಜ್, ನೂರ್ ಜಹಾನ್, ಜಾನಿ ಬೇಗಂ, ಸಬೀನಾ ಮತ್ತು ಆರು ವರ್ಷದ ಹೀನಾ ಎಂದು ಗುರುತಿಸಲಾಗಿದೆ.
ಗಾಯಾಳುಗಳನ್ನು ಒಂಗೋಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಕಾರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ದರ್ಶಿ ಪೊಲೀಸರು ತಿಳಿಸಿದ್ದಾರೆ.