ಚೆನ್ನೈ: ತಮಿಳುನಾಡಿನ ದಿಂಡಿಗಲ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಒಂದು ಮಗು ಸೇರಿದಂತೆ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದಾರೆ. ಬೆಂಕಿ ಅವಘಡದ ಬಗ್ಗೆ ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.
ನೂರಕ್ಕೂ ಹೆಚ್ಚು ರೋಗಿಗಳು ಒಳಗೆ ಸಿಲುಕಿಕೊಂಡಿದ್ದು, ಅವರನ್ನು ಸ್ಥಳಾಂತರಿಸಲಾಗಿದೆ. ಈ ಆಸ್ಪತ್ರೆಯು ನಾಲ್ಕು ಮಹಡಿಗಳನ್ನು ಹೊಂದಿದೆ. ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಖಾಸಗಿ ಆಂಬ್ಯುಲೆನ್ಸ್ ಸೇರಿದಂತೆ 50 ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳನ್ನು ಕರೆಸಲಾಗಿತ್ತು.
ತಿರುಚ್ಚಿ ರಸ್ತೆಯಲ್ಲಿರುವ ಸಿಟಿ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಎಲ್ಲಾ ಬಲಿಪಶುಗಳು ಲಿಫ್ಟ್ ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು.
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿದೆ.