
ಶ್ರೀಮಂತಿಕೆ ಯಾರಿಗೆ ಬೇಡ ಹೇಳಿ ? ಐಷಾರಾಮಿ ಬಂಗಲೆ, ಕೈತುಂಬಾ ಹಣ, ಕಾರು, ಆಳು ಕಾಳುಗಳು ಹೀಗೆ ಸರ್ವ ಸೌಕರ್ಯವನ್ನು ಆಸೆ ಪಡುವುದು ಸಹಜ. ಆದ್ರೆ ಸಿರಿವಂತಿಕೆ ಅನ್ನೋದು ಎಲ್ಲರಿಗೂ ಒಲಿಯುವುದಿಲ್ಲ. ಜಗತ್ತೇ ನಿಬ್ಬೆರಗಾಗಿ ನೋಡುವಂತಹ ಶ್ರೀಮಂತರಲ್ಲೊಬ್ಬ ಹಸನಲ್ ಬೊಲ್ಕಿಯಾ.
ಈಗಲೂ ರಾಜರ ಆಳ್ವಿಕೆಯಲ್ಲೇ ಇರುವ ಏಷ್ಯಾದ ಬ್ರುನೈ ದೇಶದ ಅರಸ ಇವನು. ಇಲ್ಲಿ ಸುಲ್ತಾನನಾಗಿರೋ ಹಸನಲ್ ಬೊಲ್ಕಿಯಾಗೆ 75 ವರ್ಷ. ಸುಲ್ತಾನ್ ಒಮರ್ ಅಲಿ ಸೈಫುದ್ದೀನ್ III ರ ಮಗನಾಗಿ ಜನಿಸಿದ್ದ. ಸೈಫುದ್ದೀನ್ಗೆ 10 ಮಕ್ಕಳು, ಹಲವಾರು ಹೆಂಡತಿಯರಿದ್ದರು.
ಚಿಕ್ಕ ವಯಸ್ಸಿನಲ್ಲೇ ಆತ ಬೊಲ್ಕಿಯಾನನ್ನು ಉತ್ತರಾಧಿಕಾರಿಯಾಗಿ ನೇಮಿಸಿಬಿಟ್ಟಿದ್ದ. ಹಸನಲ್ ಬೊಲ್ಕಿಯಾ ಕೌಲಾಲಂಪುರ್ದ ವಿಕ್ಟೋರಿಯಾ ಸಂಸ್ಥೆ ಮತ್ತು ಇಂಗ್ಲೆಂಡ್ನ ರಾಯಲ್ ಮಿಲಿಟರಿ ಅಕಾಡೆಮಿಯಲ್ಲಿ ಅಧ್ಯಯನ ಮಾಡಿದ್ದಾನೆ. ಈತನಿಗೆ ಮೂವರು ಪತ್ನಿಯರು. ಐವರು ಪುತ್ರರು ಮತ್ತು ಏಳು ಪುತ್ರಿಯರ ದೊಡ್ಡ ಸಂಸಾರ. ಈತ ಅಧಿಕಾರಕ್ಕೆ ಬಂದಿದ್ದು 1967ರಲ್ಲಿ.
ಸಿಂಹಾಸನ ಏರಿದ ಹಸನಲ್ 1980 ರವರೆಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದ. ಈತನ ಆಸ್ತಿ 14,700 ಕೋಟಿ ರೂಪಾಯಿಗೂ ಹೆಚ್ಚಿತ್ತು. ತೈಲ ನಿಕ್ಷೇಪಗಳು ಮತ್ತು ನೈಸರ್ಗಿಕ ಅನಿಲವೇ ಆದಾಯದ ಮೂಲ. ಬೊಲ್ಕಿಯಾ ವಿಶ್ವದ ಅತ್ಯಂತ ಶ್ರೀಮಂತ ರಾಜಮನೆತನದವರಲ್ಲಿ ಒಬ್ಬ. ಅಂದಾಜು 30 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಇಂಡೋನೇಷ್ಯಾ, ಮಲೇಷ್ಯಾ, ವಿಯೆಟ್ನಾಂ ಮತ್ತು ಥೈಲ್ಯಾಂಡ್ ನಂತರ ಬ್ರೂನೈ ದೇಶ ಆಗ್ನೇಯ ಏಷ್ಯಾದಲ್ಲಿ ಐದನೇ ಪ್ರಮುಖ ತೈಲ ಉತ್ಪಾದಕ ರಾಷ್ಟ್ರವಾಗಿದೆ.
ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ರಫ್ತು ಸುಲ್ತಾನ್ ಹಸನಲ್ ಬೊಲ್ಕಿಯಾನನ್ನು ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರನ್ನಾಗಿ ಮಾಡಿದೆ. 1988 ರಲ್ಲಿ, ಫೋರ್ಬ್ಸ್ ಸುಲ್ತಾನ್ ಬೊಲ್ಕಿಯಾ ಅವರನ್ನು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಪರಿಗಣಿಸಿತ್ತು.
ಬೊಲ್ಕಿಯಾ ಬಳಿ ಇವೆ 7 ಸಾವಿರ ಕಾರುಗಳು…..
ಬೊಲ್ಕಿಯಾ ಬಳಿ ಉತ್ತಮ ಕಾರುಗಳ ಸಂಗ್ರಹವಿದೆ. ಚಿನ್ನ ಲೇಪಿತ ರೋಲ್ಸ್ ರಾಯ್ಸ್ ಸೇರಿದಂತೆ ವಿಶ್ವದ ಅತಿದೊಡ್ಡ ಅಪರೂಪದ ಕಾರುಗಳ ಸಂಗ್ರಹವನ್ನು ಈತ ಹೊಂದಿದ್ದಾನೆ. ಈತನ ಬಳಿ ಸುಮಾರು 7,000 ಕಾರುಗಳಿದ್ದು ಅವುಗಳ ಮೌಲ್ಯ 5 ಬಿಲಿಯನ್ ಡಾಲರ್ಗಿಂತಲೂ ಹೆಚ್ಚು. ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಅನೇಕ ಖಾಸಗಿ ಜೆಟ್ಗಳಿಗೂ ಈತ ಒಡೆಯ. ಬೋಯಿಂಗ್ 747-400, ಬೋಯಿಂಗ್ 767-200 ಮತ್ತು ಏರ್ಬಸ್ A340-200 ಜೆಟ್ಗಳನ್ನು ಹೊಂದಿದ್ದಾನೆ.
2550 ಕೋಟಿಗೂ ಹೆಚ್ಚು ಮೌಲ್ಯದ ಅರಮನೆ…….
ಇನ್ನು ಅರಮನೆಯಲ್ಲಂತೂ ಸೌಕರ್ಯಗಳ ಸರಮಾಲೆಯೇ ಇದೆ. ಬೊಲ್ಕಿಯಾ ವಾಸಿಸುವ ಇಸ್ತಾನಾ ನೂರುಲ್ ಇಮಾನ್ ಅರಮನೆಯ ಮೌಲ್ಯ 2550 ಕೋಟಿ ರೂಪಾಯಿ. ಇಲ್ಲಿ 1700 ಕ್ಕೂ ಹೆಚ್ಚು ಕೊಠಡಿಗಳು, 257 ಸ್ನಾನಗೃಹಗಳು ಮತ್ತು ಐದು ಈಜುಕೊಳಗಳಿವೆ. 110 ಗ್ಯಾರೇಜ್ಗಳ ಜೊತೆಗೆ, 200 ಕುದುರೆಗಳಿಗೆ ಹವಾನಿಯಂತ್ರಿತ ಲಾಯಗಳಿವೆ.
ಬೋಲ್ಕಿಯಾ ಈ ದೇಶದ ರಾಜ ಮಾತ್ರವಲ್ಲ, ಪ್ರಧಾನ ಮಂತ್ರಿ, ಹಣಕಾಸು ಮಂತ್ರಿ, ವಿದೇಶಾಂಗ ವ್ಯವಹಾರ ಮತ್ತು ವ್ಯಾಪಾರ ಮಂತ್ರಿ, ಪೊಲೀಸ್ ಅಧೀಕ್ಷಕ, ರಕ್ಷಣಾ ಮಂತ್ರಿ ಮತ್ತು ಸಶಸ್ತ್ರ ಪಡೆಗಳ ಕಮಾಂಡರ್ ಆಗಿದ್ದಾನೆ. ಬೋಲ್ಕಿಯಾ ಹೇರ್ ಕಟ್ ಗಾಗಿಯೇ 13 ಲಕ್ಷ ರೂಪಾಯಿ ಖರ್ಚು ಮಾಡುತ್ತಾನಂತೆ. ಲಂಡನ್ನಿಂದ ತನ್ನ ನೆಚ್ಚಿನ ಕ್ಷೌರಿಕನನ್ನು ಕರೆಸುತ್ತಾನೆ. ಈತನ ಸಿರಿವಂತಿಕೆ ಮತ್ತು ಐಷಾರಾಮಿ ಬದುಕು ನೋಡಿ ಜಗತ್ತೇ ಬೆರಗಾಗಿದೆ.