ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಲು ಸಾಧ್ಯವಾಗದ ಬಿಜೆಪಿ ನಾಯಕರು ಯಾವ ಪುರುಷಾರ್ಥಕ್ಕಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ದಿ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ 4 ತಿಂಗಳು ಕಳೆದಿವೆ. ಆದರೆ ಒಂದೇ ಒಂದು ರಸ್ತೆ ಗುಂಡಿ ಮುಚ್ಚಲು ಸಾಧ್ಯವಾಗುತ್ತಿಲ್ಲ. ಬೆಂಗಳೂರು ನಗರದಲ್ಲಿಯೇ 7 ಸಚಿವರಿದ್ದಾರೆ. ಸ್ವತ: ಮುಖ್ಯಮಂತ್ರಿ ಬೊಮ್ಮಾಯಿ ಬಳಿಯೇ ಬೆಂಗಳೂರು ನಗರ ಉಸ್ತುವಾರಿಯಿದೆ. ವಾರದ ಹಿಂದಷ್ಟೇ ಸಿಎಂ ಸಿಟಿ ರೌಂಡ್ಸ್ ಹೊಡೆದರೂ ನಗರದ ರಸ್ತೆಗುಂಡಿಗಳಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಯಾವೊಬ್ಬ ಅಧಿಕಾರಿಗಳು ಕೂಡ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಕಿಡಿಕಾರಿದರು.
ನವೆಂಬರ್ 1ರಂದು ‘ಮದಗಜ’ ಚಿತ್ರದ ವಿಡಿಯೋ ಸಾಂಗ್ ರಿಲೀಸ್
ಬಿಜೆಪಿ ನಾಯಕರು ಸ್ವತಃ ಅಭಿವೃದ್ಧಿ ಕೆಲಸ ಮಾಡಲ್ಲ, ಬೇರೆಯವರು ಮಾಡಲೂ ಬಿಡುವುದಿಲ್ಲ. ರಸ್ತೆ ಗುಂಡಿ ವಿಚಾರವಾಗಿ ಹೈಕೋರ್ಟ್ ಛೀಮಾರಿ ಹಾಕಿದರೂ ಇನ್ನೂ ಎಚ್ಚೆತ್ತುಕೊಂಡಿಲ್ಲ. ನಮ್ಮ ಅವಧಿಯಲ್ಲಿ ರಸ್ತೆ ಅಭಿವೃದ್ಧಿಗಾಗಿ 2-3 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿದ್ದೆವು, ಟೆಂಡರ್ ನೀತಿ ಜಾರಿ ಮಾಡಿದ್ದೆವು. ಆದರೆ ಬಿಜೆಪಿ ಸರ್ಕಾರ ಇದ್ಯಾವುದನ್ನೂ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಆಡಳಿತದಲ್ಲಿ ಕೇವಲ ಘೋಷಣೆಗಳಷ್ಟೇ ಯಾವುದೇ ಅನುದಾನಗಳು ಬಿಡುಗಡೆಯಾಗಿಲ್ಲ. ಅನುದಾನ ಬಿಡುಗಡೆ ಮಾಡಿದ್ದಾರೆ ಎನ್ನುವುದಾದರೆ ಸಿಎಂ ಸ್ಪಷ್ಟ ಪಡಿಸಲಿ ಎಂದು ಸವಾಲು ಹಾಕಿದರು.