ಕಠ್ಮಂಡು : ನೇಪಾಳದಲ್ಲಿ ಶುಕ್ರವಾರ ತಡರಾತ್ರಿ 6.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 69 ಜನರು ಸಾವನ್ನಪ್ಪಿದ್ದಾರೆ. ಭೂಕಂಪದ ಕೇಂದ್ರ ಬಿಂದು ಜಜರ್ಕೋಟ್ ಜಿಲ್ಲೆಯ ಲಾಮಿಡಾಂಡಾ ಪ್ರದೇಶದಲ್ಲಿತ್ತು ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ವರದಿಯ ಪ್ರಕಾರ, ಜಜರ್ಕೋಟ್ನ ಸ್ಥಳೀಯ ಅಧಿಕಾರಿಯೊಬ್ಬರು ಜಿಲ್ಲೆಯಲ್ಲಿ ಕನಿಷ್ಠ 34 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ನೆರೆಯ ರುಕುಮ್ ಪಶ್ಚಿಮ ಜಿಲ್ಲೆಯಲ್ಲಿ, ಕನಿಷ್ಠ 35 ಸಾವುಗಳು ವರದಿಯಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಾಯಾಳುಗಳ ರಕ್ಷಣೆ ಮತ್ತು ಪರಿಹಾರಕ್ಕಾಗಿ ದೇಶದ ಎಲ್ಲಾ ಮೂರು ಭದ್ರತಾ ಸಂಸ್ಥೆಗಳನ್ನು ಸಜ್ಜುಗೊಳಿಸಲಾಗಿದೆ ಎಂದು ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಅವರ ಕಚೇರಿ ತಿಳಿಸಿದೆ. ದೈಲೇಖ್, ಸಾಲ್ಯಾನ್ ಮತ್ತು ರೋಲ್ಪಾ ಜಿಲ್ಲೆಗಳು ಸೇರಿದಂತೆ ಇತರ ಜಿಲ್ಲೆಗಳಿಂದಲೂ ಗಾಯಗಳು ಮತ್ತು ಆಸ್ತಿಪಾಸ್ತಿಗೆ ಹಾನಿಯಾದ ವರದಿಗಳು ಬರುತ್ತಿವೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಗಾಯಾಳುಗಳಿಗೆ ಜಜರ್ಕೋಟ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಜರ್ಕೊಕ್ಟ್ ಕಠ್ಮಂಡುವಿನ ಪಶ್ಚಿಮಕ್ಕೆ ಸುಮಾರು 500 ಕಿಲೋಮೀಟರ್ ದೂರದಲ್ಲಿದೆ.