ಬೆಂಗಳೂರು: ಕೇರಳದ ವಯನಾಡು ದುರಂತದ ಬೆನ್ನಲ್ಲೇ ರಾಜ್ಯದಲ್ಲಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ 2015ರ ನಂತರ ಅಕ್ರಮವಾಗಿ ತಲೆ ಎತ್ತಿರುವ ರೆಸಾರ್ಟ್, ಹೋಂ ಸ್ಟೇ ಸೇರಿ ಎಲ್ಲ ಬಗೆಯ ಅರಣ್ಯ ಒತ್ತುವರಿ ತೆರವಿಗೆ ಸೋಮವಾರದಿಂದ ಕಾರ್ಯಾಚರಣೆ ಆರಂಭಿಸಲಾಗಿದೆ.
ಮೊದಲ ದಿನವೇ ಪಶ್ಚಿಮ ಘಟ್ಟದ 69 ಎಕರೆ ಒತ್ತುವರಿ ತೆರವು ಮಾಡಲಾಗಿದೆ. ಅಕ್ರಮವಾಗಿ ನಿರ್ಮಿಸಿದ್ದ ಹೋಂ ಸ್ಟೇ, ರೆಸಾರ್ಟ್ ತೆರವು ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೇ 69 ಎಕರೆ ಅರಣ್ಯ ಗುರುತಿಸಿ ತೆರವು ಮಾಡಿಸಲಾಗುತ್ತಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಜೀವನೋಪಾಯಕ್ಕಾಗಿ ಮಾಡಿಕೊಂಡ ಮೂರು ಎಕರೆವರೆಗೆನ ಒತ್ತುವರಿ ತೆರವು ಮಾಡುವುದಿಲ್ಲ. ಅರಣ್ಯ ಹಕ್ಕು ಕಾಯ್ದೆಯಡಿ ಈಗಾಗಲೇ ಅರ್ಜಿ ಸಲ್ಲಿಸಿದ್ದರೆ ಒತ್ತುವರಿ ತೆರವು ಮಾಡುವುದಿಲ್ಲ. ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ 36 ಎಕರೆ ಅರಣ್ಯ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.