ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗ್ತಿದ್ದಂತೆ ಮೂರನೇ ಅಲೆ ಭಯ ಶುರುವಾಗಿದೆ. ಕೊರೊನಾ ಮೂರನೇ ಅಲೆ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಹತ್ವದ ಮಾಹಿತಿ ನೀಡಿದೆ. ದೇಶದ ಸುಮಾರು ಶೇಕಡಾ 68 ಜನರಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡುವ ಪ್ರತಿಕಾಯ ಅಭಿವೃದ್ಧಿಯಾಗಿದೆ. ಹಾಗಾಗಿ ಮೂರನೇ ಅಲೆ ಹೆಚ್ಚು ಪರಿಣಾಮಕಾರಿಯಾಗಿರಲು ಸಾಧ್ಯವಿಲ್ಲವೆಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ಜೂನ್-ಜುಲೈನಲ್ಲಿ ಸಮೀಕ್ಷೆಯೊಂದು ನಡೆದಿದೆ. ಜನರ ಪ್ರತಿಕಾಯದ ಬಗ್ಗೆ ಸಮೀಕ್ಷೆ ನಡೆದಿದೆ. ಕೊರೊನಾ ಕಾರಣದಿಂದಾಗಿ ಪ್ರತಿಕಾಯ ಹೆಚ್ಚಾಗಿದೆಯಾ ಇಲ್ಲ ಲಸಿಕೆಯಿಂದ ಹೆಚ್ಚಾಗಿದೆಯಾ ಎಂಬ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ದೇಶದ 21 ರಾಜ್ಯಗಳ 70 ಜಿಲ್ಲೆಗಳ 28,975 ಜನರ ಮೇಲೆ ಈ ಸರ್ವೆ ನಡೆದಿದೆ. ಇವರಲ್ಲಿ ಶೇಕಡಾ 62.2 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿರಲಿಲ್ಲ. ಆದರೆ ಶೇಕಡಾ 24.8 ರಷ್ಟು ಮಂದಿ ಒಂದು ಡೋಸ್ ಲಸಿಕೆ ಪಡೆದಿದ್ದರು. ಶೇಕಡಾ 13 ರಷ್ಟು ಜನರು ಎರಡೂ ಡೋಸ್ ಪಡೆದಿದ್ದರು. ಸಮೀಕ್ಷೆಯ ಸಮಯದಲ್ಲಿ, ಲಸಿಕೆಯ ಒಂದು ಡೋಸ್ ತೆಗೆದುಕೊಂಡವರಲ್ಲಿ ಸಿರೊಪೊಸಿಟಿವಿಟಿ ದರವು ಶೇಕಡಾ 81 ರಷ್ಟು ಮತ್ತು ಎರಡೂ ಡೋಸ್ ತೆಗೆದುಕೊಂಡವರಲ್ಲಿ ಶೇಕಡಾ 89.8 ರಷ್ಟಿದೆ ಎಂಬುದು ಗೊತ್ತಾಗಿದೆ.
ಹಾಗಂತ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಸಮೀಕ್ಷೆ ಪ್ರಕಾರ, ದೇಶದ ಜನಸಂಖ್ಯೆಯ ಮೂರನೇ ಒಂದು ಭಾಗದ ಜನರಲ್ಲಿ ಪ್ರತಿಕಾಯಗಳು ಇನ್ನೂ ಕಂಡುಬಂದಿಲ್ಲ. ಅಂದರೆ ಸುಮಾರು 40 ಕೋಟಿ ಜನರು ಮೂರನೇ ಅಲೆಗೆ ಒಳಗಾಗುವ ಸಾಧ್ಯತೆಯಿದೆ. ಪ್ರತಿಕಾಯಗಳು ಕಡಿಮೆಯಿರುವ ಜನರು ಹೆಚ್ಚಿನ ಎಚ್ಚರಿಕೆ ವಹಿಸುವ ಅವಶ್ಯಕತೆಯಿದೆ.