ಗಾಜಿಯಾಬಾದ್‌ನ 65 ವರ್ಷದ ಮಹಿಳೆಯೊಬ್ಬರು ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಪರಿಚಯವಾದ ವ್ಯಕ್ತಿಯಿಂದ 50 ಲಕ್ಷ ರೂಪಾಯಿ ವಂಚನೆಗೊಳಗಾಗಿದ್ದಾರೆ. 2003 ರಿಂದ ವಿಚ್ಛೇದನ ಪಡೆದು ಒಂಟಿಯಾಗಿದ್ದ ಮಹಿಳೆ, ಜೀವನದಲ್ಲಿ ಜೊತೆಗಾರನ ಹುಡುಕಾಟದಲ್ಲಿದ್ದರು. ಅವರ ಆಸೆಗೆ ಮ್ಯಾಟ್ರಿಮೋನಿಯಲ್ ಸೈಟ್ ಮುಖಾಂತರ ಬಂದ ವ್ಯಕ್ತಿ ಬೆಂಕಿ ಇಟ್ಟಿದ್ದಾನೆ.
ಕೌಶಾಂಬಿಯಲ್ಲಿ ವಾಸಿಸುವ ಈ ಮಹಿಳೆ, ಆನ್‌ಲೈನ್ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ 68 ವರ್ಷದ ವ್ಯಕ್ತಿಯನ್ನು ಭೇಟಿಯಾದರು. ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿ ಮದುವೆಯವರೆಗೂ ಹೋಯಿತು. ಮದುವೆಯಾದ ಬಳಿಕ ಆತ ಮಹಿಳೆಯ ಅಪಾರ್ಟ್‌ಮೆಂಟ್‌ಗೆ ಬಂದು 18 ತಿಂಗಳುಗಳ ಕಾಲ ವಾಸಿಸಿದ್ದಾನೆ.
ಈ ಅವಧಿಯಲ್ಲಿ, ಆತ ಮಹಿಳೆಯ ಹಲವಾರು ಸ್ಥಿರ ಠೇವಣಿಗಳನ್ನು ಮುರಿದು, ಹಣವನ್ನು ಜಂಟಿ ಖಾತೆಗೆ ವರ್ಗಾಯಿಸುವಂತೆ ಮನವೊಲಿಸಿದ್ದಾನೆ. ಅಲ್ಲದೆ, ಆತನ ಮಗಳಿಗಾಗಿ 50 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಖರೀದಿಸಲು ಆಕೆಯ ಹಣವನ್ನು ಬಳಸಿಕೊಂಡಿದ್ದಾನೆ.
ಕೊನೆಗೆ, ಜಂಟಿ ಖಾತೆಯಲ್ಲಿದ್ದ ಎಲ್ಲಾ ಹಣವನ್ನು ಆತನ ಮಗಳು ಮತ್ತು ಅಳಿಯನ ಖಾತೆಗಳಿಗೆ ವರ್ಗಾಯಿಸಿದ್ದಾನೆ. ಮದುವೆಯ ಪ್ರಮಾಣ ಪತ್ರ ಮತ್ತು ಹಣಕಾಸಿನ ವಹಿವಾಟುಗಳ ಬಗ್ಗೆ ಮಹಿಳೆ ಪ್ರಶ್ನಿಸಿದಾಗ, ಆತ ಪರಾರಿಯಾಗಿದ್ದಾನೆ.
ಹೈದರಾಬಾದ್ ಮೂಲದ ಖಾಸಗಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಈ ಮಹಿಳೆ, ವೃತ್ತಿ ಜೀವನದಲ್ಲಿ ಯಶಸ್ಸು ಕಂಡಿದ್ದರು. ಆದರೆ, ವೈಯಕ್ತಿಕ ಜೀವನದಲ್ಲಿ ಒಂಟಿತನ ಅನುಭವಿಸುತ್ತಿದ್ದರು. ಈ ಒಂಟಿತನವೇ ಆಕೆಯನ್ನ ಮೋಸದ ಕೂಪಕ್ಕೆ ತಳ್ಳಿದೆ. ಪೊಲೀಸರು ಆರೋಪಿಯನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ.