ಕೊರೊನಾದಿಂದಾಗಿ ವಿದೇಶದಲ್ಲಿ ವ್ಯಾಸಂಗ ಮಾಡಬೇಕೆಂದುಕೊಂಡಿದ್ದ ಅನೇಕರ ಕನಸು ಮುಂದೂಡಿಕೆ ಆಗಿದೆ. ಆದರೆ ಹಾಗಂತ ಯಾರೂ ತಮ್ಮ ಕನಸನ್ನು ಹತ್ತಿಕ್ಕಿದಂತೆ ಕಾಣುತ್ತಿಲ್ಲ.
ವಿಶ್ವದಲ್ಲಿ ಕೊರೊನಾ ಲಸಿಕೆ ಅಭಿಯಾನ ಚುರುಕುಗೊಳ್ಳುತ್ತಿರುವ ಬೆನ್ನಲ್ಲೇ ಸಹಜ ಸ್ಥಿತಿಗೆ ಜಗತ್ತು ಮರಳುವ ವಿಶ್ವಾಸ ಕೂಡ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಶೇಕಡಾ 64ರಷ್ಟು ಭಾರತೀಯ ವಿದ್ಯಾರ್ಥಿಗಳು ಅಮೆರಿಕ ಹಾಗೂ ಕೆನಡಾದಲ್ಲಿ ವ್ಯಾಸಂಗ ಮಾಡುವ ಆಸೆ ಹೊಂದಿದ್ದಾರೆ ಎಂದು ಮೆಂಟರ್ ಕಾನ್ಫರೆನ್ಸ್ 2021 ಸಮೀಕ್ಷೆಯಲ್ಲಿ ಬಯಲಾಗಿದೆ.
79 ಪ್ರತಿಶತ ವಿದ್ಯಾರ್ಥಿಗಳು ಹೇಳುವಂತೆ ವಿದೇಶದಲ್ಲಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವುದರಿಂದ ಉದ್ಯೋಗದ ಅವಕಾಶ ಹೆಚ್ಚಲಿದೆಯಂತೆ. ಅಲ್ಲದೇ ಪ್ರಸ್ತುತ ಇರುವ ಆನ್ಲೈನ್ ಶಿಕ್ಷಣದ ಬಗ್ಗೆ ಬೇಸರ ವ್ಯಕ್ತಪಡಿಸಿರುವ 71 ಪ್ರತಿಶತ ವಿದ್ಯಾರ್ಥಿಗಳು ತರಗತಿಗಳಲ್ಲಿ ವ್ಯಾಸಂಗ ಮಾಡುವ ಆಯ್ಕೆಯೇ ಹೆಚ್ಚು ಪರಿಣಾಮಕಾರಿ ಎಂದು ಹೇಳಿದ್ದಾರೆ.
ಈ ರೀತಿಯ ಆಕಾಂಕ್ಷೆಯನ್ನು ಹೊಂದಿರುವವರಲ್ಲಿ ಹೆಚ್ಚಿನ ಸಂಖ್ಯೆಯ ಅಂದರೆ 16.31 ಪ್ರತಿಶತ ವಿದ್ಯಾರ್ಥಿಗಳು ಮಹಾರಾಷ್ಟ್ರದವರೇ ಆಗಿದ್ದಾರೆ. ಇನ್ನುಳಿದಂತೆ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ 52.19 ಶೇಕಡಕ್ಕೂ ಅಧಿಕ ವಿದ್ಯಾರ್ಥಿಗಳು ಈ ಅಭಿಪ್ರಾಯ ಹೊಂದಿದ್ದಾರೆ.