ವಲ್ಸಾದ್: 63 ವರ್ಷದ ಗುಜರಾತಿನ ವ್ಯಕ್ತಿಯೊಬ್ಬರು ಕೊರೆಯುವ ಚಳಿಯಲ್ಲಿ ಚಾದರ್ ಟ್ರೆಕ್ ಪೂರ್ಣಗೊಳಿಸಿದ್ದು, ದಾಖಲೆ ಮಾಡಿದ್ದಾರೆ. ಅಲ್ಲಿ ತಾಪಮಾನ ಮೈನಸ್ 40 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗಿತ್ತು. ದೇಶದ ಅತ್ಯಂತ ಕಷ್ಟಕರವಾದ ಚಾರಣಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಚಾದರ್ ಟ್ರೆಕ್ ಅಥವಾ ಝನ್ಸ್ಕಾರ್ ಗಾರ್ಜ್ ಟ್ರೆಕ್ ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿರುವ ಹೆಪ್ಪುಗಟ್ಟಿದ ಝನ್ಸ್ಕರ್ ನದಿಯ ಮೇಲಿದೆ.
ಕಾಂತಿಭಾಯಿ ಪಟೇಲ್ ಅವರು ಚಾದರ್ ಚಾರಣವನ್ನು ಪೂರ್ಣಗೊಳಿಸಿದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ. ಅವರು ಜನವರಿ 23, 2023 ರಂದು ಈ ಸಾಧನೆಯನ್ನು ಮಾಡಿದರು. ಕುತೂಹಲಕಾರಿ ಸಂಗತಿಯೆಂದರೆ, ಇವರು ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಐದು ಬಾರಿ ಪೂರ್ಣಗೊಳಿಸಿದ್ದಾರೆ.
ಕಾಂತಿಭಾಯಿ ಪಟೇಲ್ ಅವರು 2014 ರಲ್ಲಿ ತಮ್ಮ ಹೆಂಡತಿಯನ್ನು ಕಳೆದುಕೊಂಡ ನಂತರ ಗುಜರಾತ್‌ನ ವಾಪಿಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ. ಆಕೆಯ ಮರಣದ ನಂತರ, ಕಾಂತಿಭಾಯಿ ಅವರ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಇವರ ಒಬ್ಬ ಮಗಳು ಬೆಂಗಳೂರಿನಲ್ಲಿ ಐಟಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಮತ್ತೊಬ್ಬರು ಪುಣೆಯಲ್ಲಿ ವಾಸವಾಗಿದ್ದಾರೆ. ನಿವೃತ್ತರಾದ ನಂತರ, ಕಾಂತಿಭಾಯ್ ಅವರು ಫಾರ್ಮಾ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿದರು. ಆದಾಗ್ಯೂ, ಒಂಟಿತನ ಕಾಡಿದ್ದರಿಂದ ಸಾಹಸಮಯ ಪ್ರವೃತ್ತಿಗೆ ಇಳಿದರು. ಈಗ ಸಾಹಸದ ಮೇಲೆ ಸಾಹಸ ಮಾಡಿದ್ದಾರೆ.
ಈ ಮೊದಲು ಕಾಂತಿಭಾಯಿ ಸೈಕ್ಲಿಂಗ್‌ನಲ್ಲಿ ಕೆಲವು ದಾಖಲೆಗಳನ್ನು ಮಾಡಿದ್ದಾರೆ. ಕಳೆದ 3 ವರ್ಷಗಳಲ್ಲಿ 55,000 ಕಿ.ಮೀ.ಗೂ ಹೆಚ್ಚು ದೂರ ಸೈಕಲ್ ತುಳಿದಿದ್ದಾರೆ. ಭಾರತದ ಬಹುತೇಕ ನಗರಗಳಲ್ಲಿ ಸೈಕಲ್ ತುಳಿದಿರುವ ಇವರು, ಪ್ರತಿದಿನ 30 ಕಿ.ಮೀಗೂ ಹೆಚ್ಚು ಸೈಕಲ್ ತುಳಿಯುತ್ತಾರೆ.