ಬಾಲಸೋರ್: ಇತ್ತೀಚೆಗೆ ಮದುವೆ ಕಾರ್ಯಕ್ರಮಗಳಲ್ಲಿ ಡಿಜೆ ಇಲ್ಲದಿದ್ರೆ ಮದುವೆಯೇ ಸಪ್ಪೆ ಅನಿಸುತ್ತದೆ. ಮದುವೆ ದಿನ ಬಹಳ ಜೋರಾಗಿ ಡಿಜೆ ಇಡುವುದು ಸಾಮಾನ್ಯವಾಗಿದೆ. ಸಂಗೀತ ಹಾಗೂ ನೃತ್ಯವಿಲ್ಲದಿದ್ರೆ ವಿವಾಹವೇ ಅಪೂರ್ಣ ಎಂದೆನಿಸುತ್ತದೆ. ಅತಿಥಿಗಳಿಗೆ ಜೋರಾದ ಸಂಗೀತ ಮನರಂಜನೆ ನೀಡಿದ್ರೆ, ಇತರರಿಗೆ ಅದು ತೊಂದರೆಯಾಗುತ್ತದೆ.
ಹಾಗೆಯೇ ಇಲ್ಲೊಂದೆಡೆ, ಮದುವೆಯ ಸಮಯದಲ್ಲಿ ಜೋರಾದ ಸಂಗೀತ ಇಟ್ಟಿದ್ರಿಂದ ತನ್ನ 63 ಕೋಳಿಗಳು ಮೃತಪಟ್ಟಿವೆ ಎಂದು ಕೋಳಿ ಸಾಕಣೆದಾರರೊಬ್ಬರು ದೂರಿದ್ದಾರೆ. ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ. ತಮ್ಮ ಗ್ರಾಮಕ್ಕೆ ಮದುಮಗನ ಮೆರವಣಿಗೆ ಎಂಟ್ರಿ ಕೊಟ್ಟಿದೆ. ಜೋರಾದ ಸಂಗೀತದಿಂದ ತಮ್ಮ ಫಾರಂನಲ್ಲಿದ್ದ 63 ಕೋಳಿಗಳು ಹೃದಯಾಘಾತದಿಂದ ಸಾವನ್ನಪ್ಪಿವೆ ಎಂದು ಅವರು ಆರೋಪಿಸಿದ್ದಾರೆ.
ವರದಿ ಪ್ರಕಾರ, ಭಾನುವಾರ ರಾತ್ರಿ 11 ಗಂಟೆಯ ಸುಮಾರಿಗೆ ಮದುಮಗನ ಮದುವೆಯ ಮೆರವಣಿಗೆಯು ಜೋರಾದ ಸಂಗೀತ ನುಡಿಸುವ ಮೂಲಕ ಗ್ರಾಮಕ್ಕೆ ಬಂದಿದ್ದಾರೆ ಎಂದು ರಂಜಿತ್ ಪರಿದಾ ಹೇಳಿದ್ದಾರೆ. ಈ ವೇಳೆ ಜೋರಾಗಿ ಪಟಾಕಿಗಳನ್ನು ಕೂಡ ಸಿಡಿಸಿದ್ದಾರೆ. ಭಾರಿ ಪ್ರಮಾಣದ ಶಬ್ಧಮಾಲಿನ್ಯದಿಂದಾಗಿ ತಮ್ಮ 63 ಬ್ರಾಯ್ಲರ್ ಕೋಳಿಗಳನ್ನು ಸತ್ತು ಹೋಗಿವೆ ಎಂದು ದೂರಿದ್ದಾರೆ.
ಸಂಗೀತದ ಭಾರಿ ಶಬ್ಧಕ್ಕೆ ಹೆದರಿದ ಕೋಳಿಗಳು ಭಯದಿಂದ ಓಡಲು ಪ್ರಾರಂಭಿಸಿದ್ದವು. ಧ್ವನಿ ಸ್ವಲ್ಪ ಕಡಿಮೆ ಮಾಡುವಂತೆ ವಿನಂತಿಸಿದ್ದಕ್ಕೆ, ಕುಡಿದಿದ್ದ ಅವರೆಲ್ಲರೂ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಕೋಳಿ ಫಾರಂ ಮಾಲೀಕ ರಂಜಿತ್ ಪರಿದಾ ಆರೋಪಿಸಿದ್ದಾರೆ. ಇದಾದ ಒಂದು ಗಂಟೆಯ ನಂತರ ಬಂದು ನೋಡಿದಾಗ 63 ಕೋಳಿಗಳು ಸತ್ತಿರುವುದು ಕಂಡುಬಂದಿದೆ ಎಂದಿದ್ದಾರೆ.
ರಂಜಿತ್ ಪರಿದಾ ಇದೀಗ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ.