alex Certify ಪ್ರವಾಹದಲ್ಲಿ ಸಿಲುಕಿದ್ದ ಒಂದೇ ಕುಟುಂಬದ ನಾಲ್ವರನ್ನು ರಕ್ಷಿಸಿದ 61 ವರ್ಷದ ವೃದ್ಧ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಹದಲ್ಲಿ ಸಿಲುಕಿದ್ದ ಒಂದೇ ಕುಟುಂಬದ ನಾಲ್ವರನ್ನು ರಕ್ಷಿಸಿದ 61 ವರ್ಷದ ವೃದ್ಧ !

61 ವರ್ಷದ ವೃದ್ಧರೊಬ್ಬರು ಕೇರಳದಲ್ಲಿ ಒಂದೇ ಕುಟುಂಬದ ನಾಲ್ವರನ್ನು ನೀರಿನ ಪ್ರವಾಹದಲ್ಲಿ ರಕ್ಷಿಸಿದ್ದು ರಿಯಲ್ ಹೀರೋ ಆಗಿದ್ದಾರೆ. ಕಳೆದ ವಾರ ಮೂವಾಟ್ಟುಪುಳದ ಪೋತನಿಕಾಡು ಬಳಿಯ ಕಾಳಿಯಾರ್ ನದಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನ ಮದಥನಿಯಿಲ್ ಶಶಿ ರಕ್ಷಿಸಿದ್ದಾರೆ.

ನದಿಯ ಪಕ್ಕದಲ್ಲಿಯೇ ವಾಸವಿದ್ದ 61 ವರ್ಷದ ಮದಥನಿಯಿಲ್ ಶಶಿ ತಮ್ಮ ಪ್ರಾಣದ ಬಗ್ಗೆ ಚಿಂತಿಸದೆ ನದಿಗೆ ಹಾರಿ ಪ್ರವಾಹದಲ್ಲಿ ಸಿಲುಕಿ ಕೆಲವೇ ನಿಮಿಷಗಳಲ್ಲಿ ಮುಳುಗುತ್ತಿದ್ದ ದಂಪತಿ ಹಾಗೂ ಅವರ ಇಬ್ಬರು ಮಕ್ಕಳನ್ನು ರಕ್ಷಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಪೋತನಿಕಾಡು ಬಳಿಯ ಪರಂಬಂಚೇರಿ ಮೂಲದ ರಾಯ್, ರಜೆಯ ನಿಮಿತ್ತ ಕುಟುಂಬ ಸಮೇತ ಊರಿಗೆ ತೆರಳಿದ್ದರು. ರಾಯ್ ಅವರು ತಮ್ಮ ಪತ್ನಿ ಮತ್ತು 13, 10 ಮತ್ತು 8 ವರ್ಷದ ಮೂವರು ಮಕ್ಕಳೊಂದಿಗೆ ತಮ್ಮ ಮನೆಯ ಸಮೀಪವಿರುವ ಅತ್ತಿಮಟ್ಟಂ ಘಾಟ್‌ನಲ್ಲಿ ಸ್ನಾನಕ್ಕಾಗಿ ನದಿಗೆ ತೆರಳಿದ್ದರು.

ಆದರೆ ನದಿ ದಡದಲ್ಲಿ ನಿಂತಿದ್ದ ಅವರ 10 ವರ್ಷದ ಮಗ ಕಾಲು ಜಾರಿ ನದಿಗೆ ಬಿದ್ದಿದ್ದರಿಂದ ದುರಂತ ಸಂಭವಿಸಿತು. ಈ ವೇಳೆ ರಾಯ್ ರ ಹೆಂಡತಿ ಮಗನ ರಕ್ಷಣೆಗಾಗಿ ನದಿಗೆ ಹಾರಿದರು. ಆದರೆ ಅವರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ. ತಕ್ಷಣ ರಾಯ್ ಹಾರಿ ತನ್ನ ಮಗನನ್ನು ರಕ್ಷಿಸಿದರು. ಆದರೆ ಅವರು ತನ್ನ ಹೆಂಡತಿಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ನದಿಯ ಅಲೆಗಳಲ್ಲಿ ಸಿಲುಕಿ ಪರದಾಡಿದರು. ತಮ್ಮ ಹೆತ್ತವರು ನದಿ ನೀರಲ್ಲಿ ಪ್ರಾಣಾಪಾಯಕ್ಕೆ ಸಿಲುಕಿದ್ದನ್ನು ನೋಡಿದ ಅವರ 10 ವರ್ಷದ ಬಾಲಕ ಮತ್ತು 8 ವರ್ಷದ ಮಗಳು ನದಿಗೆ ಇಳಿದು ರಕ್ಷಿಸಲು ಮುಂದಾದರು. ಆದರೆ ಅವರೂ ಸಹ ಪ್ರವಾಹದಲ್ಲಿ ಸಿಲುಕಿದ್ದಾರೆ.

ಏತನ್ಮಧ್ಯೆ ದಡದಲ್ಲಿದ್ದ ರಾಯ್ ಅವರ 13 ವರ್ಷದ ಹಿರಿಯ ಮಗಳು ಸಹಾಯ ಕೋರಿ ಮದಥನಿಯಿಲ್ ಶಶಿಯ ಮನೆಗೆ ಓಡಿದ್ದಾಳೆ. ಆದರೆ “ಹೊರದೇಶದಲ್ಲಿ ಹುಟ್ಟಿ ಬೆಳೆದ ಹುಡುಗಿಗೆ ಮಲಯಾಳಂ ಬರುತ್ತಿರಲಿಲ್ಲ. ಆದರೂ ನಾನು ಅವಳ ಧ್ವನಿಯಲ್ಲಿದ್ದ ಗಾಬರಿಯನ್ನು ಗ್ರಹಿಸಿದೆ ಮತ್ತು ಅವಳು ಏನು ಹೇಳುತ್ತಿದ್ದಾಳೆಂದು ಅರ್ಥಮಾಡಿಕೊಂಡು ನಾನು ನದಿಯತ್ತ ಧಾವಿಸಿದೆ, ”ಎಂದು ಮದಥನಿಯಿಲ್ ಶಶಿ ಘಟನೆಯನ್ನ ವಿವರಿದರು.

ನದಿ ನೀರಲ್ಲಿ ನಾಲ್ವರು ಒದ್ದಾಡುತ್ತಿರುವುದನ್ನು ನೋಡಿದೆ. ಮೊದಲು ಹುಡುಗಿ ಮತ್ತು ಹುಡುಗನನ್ನು ರಕ್ಷಿಸಿದೆ. ನದಿಗೆ ಹರಡಿದ ಮರದ ಕೊಂಬೆಯನ್ನು ಹಿಡಿದು ಒದ್ದಾಡುತ್ತಿದ್ದ ರಾಯ್ ದಂಪತಿಯನ್ನ ಬಳಿಕ ರಕ್ಷಿಸಿದ್ದಾಗಿ ತಿಳಿಸಿದರು.

ಘಟನೆಯ ಬಗ್ಗೆ ತಿಳಿದ ಇತರ ನಿವಾಸಿಗಳು ಸ್ಥಳಕ್ಕೆ ಧಾವಿಸಿ ರಾಯ್ ಮತ್ತು ಇತರರನ್ನು ಮೂವಾಟ್ಟುಪುಳದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಮುವಾಟ್ಟುಪುಳ ಶಾಸಕ ಮ್ಯಾಥ್ಯೂ ಕುಜಲನಾಡನ್ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷ ಉಲ್ಲಾಸ್ ಥಾಮಸ್ ಸೇರಿದಂತೆ ಎಲ್ಲರೂ ಮದಥನಿಯಿಲ್ ಶಶಿಯ ಸಾಹಸವನ್ನು ಶ್ಲಾಘಿಸಿದರು. ಜನರಿಂದ ಪ್ರೀತಿಯಿಂದ ‘ಶಶಿ ಚೆಟ್ಟನ್’ ಎಂದು ಕರೆಸಿಕೊಳ್ಳುವ ಅವರು ಜನರನ್ನು ರಕ್ಷಿಸಿದ್ದು ಇದೇ ಮೊದಲಲ್ಲ. ಅವರು ಈ ಹಿಂದೆ ನದಿ ನೀರಲ್ಲಿ ಮುಳುಗುತ್ತಿದ್ದ ಐವರನ್ನು ರಕ್ಷಿಸಿದ್ದರು ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

“33 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದ ನನಗೆ ನದಿಯ ಬಗ್ಗೆ ಚೆನ್ನಾಗಿ ತಿಳಿದಿದೆ” ಎಂದು ಶಶಿ ಹೇಳಿದ್ದು ಅವರ ಧೈರ್ಯದ ಕಾರ್ಯಕ್ಕೆ ಆ ಪ್ರದೇಶದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಶಿ ಮತ್ತು ಅವರ ಪತ್ನಿ ಶಿಬಿ ನದಿಯ ಬಳಿಯ ಮನೆಯಲ್ಲಿ ವಾಸವಾಗಿದ್ದಾರೆ. ದಂಪತಿಯ ಮಗಳು ಮದುವೆಯಾಗಿದ್ದು, ಅವರ ಮಗ ವಿದೇಶದಲ್ಲಿ ವಾಸಿಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...