ತಮ್ಮ 61ನೇ ವಯಸ್ಸಿನಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಒಟ್ಟಾರೆ 4,444 ಕಿಮೀಗಳಷ್ಟು ದೂರವನ್ನು ಓಡುತ್ತಾ ಸಾಗುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಲು ಮುಂದಾಗಿದ್ದಾರೆ ಕುಮಾರ್ ಅಜ್ವಾನಿ. 76 ದಿನಗಳಲ್ಲಿ ಈ ದೂರವನ್ನು ಕ್ರಮಿಸುವ ಪ್ಲಾನ್ ಅನ್ನು ಅಜ್ವಾನಿ ಹೊಂದಿದ್ದಾರೆ.
ಕುಮಾರ್ ಅವರು ಹೀಗೆ ಮಾಡುವ ಮೂಲಕ ಕದನಭೂಮಿಯಲ್ಲಿ ಶತ್ರುಗಳ ಗುಂಡಿನಿಂದ ಗಾಯಗೊಂಡು ಅಂಗವೈಕಲ್ಯಕ್ಕೆ ತುತ್ತಾದ ಯೋಧರ ನೆರವಿಗೆ ನಿಧಿ ಸಂಗ್ರಹಿಸುವ ಉದ್ದೇಶ ಹೊಂದಿದ್ದಾರೆ ಎಂದು ಜಮ್ಮುವಿನಲ್ಲಿರುವ ರಕ್ಷಣಾ ವಕ್ತಾರರೊಬ್ಬರು ತಿಳಿಸಿದ್ದಾರೆ.
ತಮ್ಮ ಈ ಅಭಿಯಾನದ ಮೂರನೇ ದಿನದಂದು ಜಮ್ಮುವಿನಲ್ಲಿರುವ ಸೈನಿಕ ಕಲ್ಯಾಣ ಇಲಾಖೆಯ ಭವನಕ್ಕೆ ಆಗಮಿಸಿದಾಗ ಭವ್ಯ ಸ್ವಾಗತ ಸ್ವೀಕರಿಸಿದ್ದಾರೆ. ನವೆಂಬರ್ 19ರಂದು ಉಧಂಪುರ ಜಿಲ್ಲೆಯಿಂದ ಕುಮಾರ್ ತಮ್ಮ ಈ ಓಟ ಆರಂಭಿಸಿದ್ದಾರೆ.
ರಾಜ್ಯ ಸೈನಿಕ ಮಂಡಳಿಯ ನಿರ್ದೇಶಕ ಬ್ರಿಗೇಡಿಯರ್ ಗುರ್ಮೀತ್ ಸಿಂಗ್ ಶಾನ್ ಕುಮಾರ್‌ರ ಈ ಮೆಗಾ ಮ್ಯಾರಾಥಾನ್‌ಗೆ ಚಾಲನೆ ನೀಡಿದ್ದಾರೆ. ಈ ವೇಳೆ ಮಾಜಿ ಸೈನಿಕರು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು.
ಎಫ್‌ಎಬಿ ಪ್ರತಿಷ್ಠಾನ ಎಂಬ ಎನ್‌ಜಿಓ ಒಂದರ ಸ್ಥಾಪಕರಾದ ಅಜ್ವಾನಿ, ಫಿಟ್ನಿಸ್ ಕುರಿತು ಜಾಗೃತಿ ಮೂಡಿಸಲು ಸಮಾನಮನಸ್ಕರೊಂದಿಗೆ ಈ ಸಮೂಹವನ್ನು ರಚಿಸಿದ್ದಾರೆ.
’ಆತ್ಮನಿರ್ಭರ ಭಾರತ ಓಟ’ ಎಂದು ಹೆಸರಿಡಲಾದ ಈ ನಾಗಾಲೋಟದ ಮೂಲಕ ಅಜ್ವಾನಿ ಗುಣಮಟ್ಟದ ಶಿಕ್ಷಣ, ಬುಡಕಟ್ಟು ಶಾಲೆಗಳ ಮೇಲ್ದರ್ಜೆಗೇರಿಸುವುದು ಹಾಗೂ ’ಏಕ ಭಾರತ ಸಮೈಕ್ಯ ಭಾರತ’ ಎಂಬ ಸಂದೇಶವನ್ನು ಸಾರಲು ಹೊರಟಿದ್ದಾರೆ.
ಅಲ್ಟ್ರಾ-ಮ್ಯಾರಾಥಾನರ್ ಆಗಿರುವ ಅಜ್ವಾನಿ ಇದುವರೆಗೂ ಅಂತರ್‌ನಗರ ಹಾಗೂ ಅಂತರ್ ರಾಜ್ಯಗಳ ಮಟ್ಟದ ಅನೇಕ ಓಟಗಳಲ್ಲಿ ಭಾಗಿಯಾಗಿದ್ದು, ಇದೇ ವೇಳೆ ಸಂಗ್ರಹಗೊಳ್ಳೂವ ನಿಧಿ ಮೂಲಕ ಸಾಮಾಜಿಕ ಸವಾಲುಗಳನ್ನು ಮೆಟ್ಟಿನಿಲ್ಲುವ ಕ್ರಮಗಳ ಕುರಿತು ಜಾಗೃತಿ ಮೂಡಿಸುತ್ತಾ ಸಾಗಿದ್ದಾರೆ.