ನವದೆಹಲಿ: ನಿಮ್ಮ ಸಂಬಳ ಎಷ್ಟು ಎಂದು ಉದ್ಯೋಗಿಗಳಿಗೆ ಕೇಳಿದಾಗ ಬಹುತೇಕ ಭಾರತೀಯರು ತಮ್ಮ ಸಂಬಳದ ನಿಜವಾದ ಗುಟ್ಟನ್ನು ಬಿಟ್ಟುಕೊಡುತ್ತಾರೆಯೇ, ಇಲ್ಲವೇ ಎಂಬ ಬಗ್ಗೆ ಲಿಂಕ್ಡ್ಇನ್ ನಡೆಸಿರುವ ಸಮೀಕ್ಷೆಯಲ್ಲಿ ಕೆಲವೊಂದು ಇಂಟ್ರಸ್ಟಿಂಗ್ ಮಾಹಿತಿಗಳು ಹೊರಬಂದಿವೆ.
ಇದರ ಪ್ರಕಾರ ಶೇ. 61 ರಷ್ಟು ಮಂದಿ ತಮ್ಮ ಸಹೋದ್ಯೋಗಿಗಳಿಗೆ ಸರಿಯಾದ ಸಂಬಳದ ಮಾಹಿತಿ ನೀಡುವುದಿಲ್ಲ. ಸಹೋದ್ಯೋಗಿಗಳಿಗಿಂತ ತಮ್ಮ ಕುಟುಂಬಸ್ಥರ ಮೇಲೆ ಇವರಿಗೆ ನಂಬಿಕೆ ಎನ್ನುತ್ತದೆ ವರದಿ. 10 ಮಂದಿ ವೃತ್ತಿಪರರ ಪೈಕಿ ಒಬ್ಬರು ಮಾತ್ರ ತಮ್ಮ ಸಂಬಳವನ್ನು ತಾವು ನಂಬುವ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಇಂಥವರ ಸಂಖ್ಯೆ ಶೇ.13 ಮಾತ್ರ. ಇನ್ನು ಶೇ.9ರಷ್ಟು ಮಂದಿ ಮಾತ್ರ ಬೇರೆ ಕಂಪೆನಿಗಳಲ್ಲಿ ಕೆಲಸ ಮಾಡುವ ಸ್ನೇಹಿತರ ಜತೆ ತಮ್ಮ ಸಂಬಳದ ವಿಷಯ ಹಂಚಿಕೊಳ್ಳುತ್ತಾರೆ ಎಂದು ಈ ವರದಿಯಲ್ಲಿ ಉಲ್ಲೇಖವಾಗಿದೆ.
ಲಿಂಕ್ಡ್‌ಇನ್‌ನ ವರ್ಕ್‌ಫೋರ್ಸ್ ಕಾನ್ಫಿಡೆನ್ಸ್ ಇಂಡೆಕ್ಸ್ ಪ್ರಕಾರ, ಭಾರತದ ಒಟ್ಟಾರೆ ಉದ್ಯೋಗಿಗಳ ವಿಶ್ವಾಸ ಸ್ವಲ್ಪಮಟ್ಟಿಗೆ ಕ್ಷೀಣಿಸಿದೆ. ಆದ್ದರಿಂದ ಹೆಚ್ಚಿನ ಮಂದಿ ತಮ್ಮ ಸಂಬಳದ ಬಗ್ಗೆ ಎಲ್ಲಿಯೂ ಮಾಹಿತಿ ಹೊರಹಾಕುವುದಿಲ್ಲ. 10 ಮಂದಿ ವೃತ್ತಿಪರರಲ್ಲಿ ಏಳು ಮಂದಿ ತಮ್ಮ ಕ್ಷೇತ್ರದಲ್ಲಿ ಮುಂದಿನ ಹಂತವನ್ನು ತಲುಪುವ ಬಗ್ಗೆ ವಿಶ್ವಾಸ ಹೊಂದಿದ್ದಾರೆ. ತಮ್ಮ ಸಂಬಳದ ಬಗ್ಗೆ ಹೇಳಿದರೆ ಎಲ್ಲಿ ಅವರ ಪ್ರಗತಿಗೆ ಅಡ್ಡಗಾಲು ಹಾಕುತ್ತಾರೆಯೋ ಎಂಬ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಹಿಂಜರಿಯುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.