ಸಾರ್ವಜನಿಕ ಸ್ವಾಮ್ಯದ ಉದ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಸಿಹಿ ಕೊಡುವ ಸುದ್ದಿಯೊಂದರಲ್ಲಿ, ವೇತನದಲ್ಲಿ 15%ನಷ್ಟು ಪರಿಷ್ಕರಣೆಯನ್ನು ಮುಂದಿನ ಕೆಲ ದಿನಗಳಲ್ಲಿ ಪಡೆಯಲಿದ್ದಾರೆ.
ವಿತ್ತ ಸಚಿವಾಲಯ ಪ್ರಕಟಿಸಿದ ಮಾಹಿತಿ ಪ್ರಕಾರ, ಸಾರ್ವಜನಿಕ ಉದ್ದಿಮೆಗಳ 60,000 ದಷ್ಟು ನೌಕರರಿಗೆ 2021ರಲ್ಲಿ ವೇತನದಲ್ಲಿ ಪರಿಷ್ಕರಣೆ ಮಾಡಲಾಗುತ್ತಿದೆ. ಈ ಸಂಬಂಧ ಮುಂದಿನ ದಿನಗಳಲ್ಲಿ ಘೋಷಣೆಯೊಂದನ್ನು ಮಾಡಲಾಗುವುದು.
ಸಾಮಾನ್ಯವಾಗಿ ವೇತನ ಪರಿಷ್ಕರಣೆಯು ಐದು ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ಸಾಮಾನ್ಯ ವಿಮೆ ಸಾರ್ವಜನಿಕ ಉದ್ದಿಮೆಗಳ ನೌಕರರಿಗೆ ಕಳೆದ ಬಾರಿ 2017ರಲ್ಲಿ ವೇತನ ಪರಿಷ್ಕರಣೆ ಮಾಡಲಾಗಿತ್ತು.
ಭಾರತದ ಸಾಮಾನ್ಯ ವಿಮಾ ಕ್ಷೇತ್ರದಲ್ಲಿ ಸದ್ಯದ ಮಟ್ಟಿಗೆ ನಾಲ್ಕು ಪಿಎಸ್‌ಯುಗಳು ಇವೆ — ನ್ಯಾಷನಲ್ ಇನ್ಶೂರೆನ್ಸ್, ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್, ದಿ ಓರಿಯೆಂಟಲ್ ಇನ್ಶೂರೆನ್ಸ್ ಮತ್ತು ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್. ಇವುಗಳ ಪೈಕಿ ನ್ಯೂ ಇಂಡಿಯಾ ಅಶ್ಶೂರೆನ್ಸ್ ಮಾತ್ರವೇ ಆರ್ಥಿಕವಾಗಿ ಸ್ಥಿರತೆ ಇರುವ ಸಂಸ್ಥೆಯಾಗಿದೆ.
ಮಿಕ್ಕ ಇನ್ಶೂರೆನ್ಸ್ ಸಂಸ್ಥೆಗಳು ಸದ್ಯದ ಮಟ್ಟಿಗೆ ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿವೆ. ಖಾಸಗಿ ಕ್ಷೇತ್ರದಿಂದ ಭಾರೀ ಪೈಪೋಟಿ ಇರುವ ಕಾರಣ ಈ ಸಂಸ್ಥೆಗಳ ಮಾರುಕಟ್ಟೆ ಪಾಲಿನಲ್ಲಿ ತೀವ್ರ ಇಳಿಕೆಯಾಗಿದೆ. ಇವುಗಳಲ್ಲಿ ಒಂದು ಸಂಸ್ಥೆಯನ್ನು ಖಾಸಗೀಕರಣ ಮಾಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2021ರ ಬಜೆಟ್ ಭಾಷಣದ ವೇಳೆ ತಿಳಿಸಿದ್ದರು.