ನವದೆಹಲಿ: ದಸರಾ, ದೀಪಾವಳಿ, ದುರ್ಗಾ ಪೂಜೆ, ಛತ್ ಹಬ್ಬ ಸೇರಿದಂತೆ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗುವ ಕಾರಣ ದೇಶದಾದ್ಯಂತ 6 ಸಾವಿರ ವಿಶೇಷ ರೈಲುಗಳ ಸಂಚಾರಕ್ಕೆ ಭಾರತೀಯ ರೈಲ್ವೆ ಇಲಾಖೆ ವ್ಯವಸ್ಥೆ ಮಾಡಿದೆ. ಇದರಿಂದ ಸುಮಾರು ಒಂದು ಕೋಟಿ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದುರ್ಗಾ ಪೂಜೆ, ದೀಪಾವಳಿ, ಛತ್ ಹಬ್ಬಗಳ ಸಂದರ್ಭದಲ್ಲಿ ದೇಶದ ಅನೇಕ ಕಡೆಗಳಿಂದ ತಮ್ಮ ಊರುಗಳಿಗೆ ತೆರಳುವ ಜನರಿಗೆ ಅನುಕೂಲವಾಗಲು ಮತ್ತು ಜನದಟ್ಟಣೆ ಕಡಿಮೆ ಮಾಡಲು 6,000 ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಯಾಣಿಕರ ಅನುಕೂಲಕ್ಕೆ 108 ರೈಲುಗಳಿಗೆ ಹೆಚ್ಚುವರಿಯಾಗಿ ಸುಮಾರು 12500 ಬೋಗಿಗಳ ವ್ಯವಸ್ಥೆ ಮಾಡಲಾಗಿದೆ. ದೀಪಾವಳಿ, ದುರ್ಗಾ ಪೂಜೆ, ಛತ್ ಪೂಜೆ ಸಂದರ್ಭದಲ್ಲಿ ವಿಶೇಷವಾಗಿ ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮಾರ್ಗದ ರೈಲುಗಳಲ್ಲಿ ಹೆಚ್ಚಿನ ಜನಸಂದಣಿ ಉಂಟಾಗುತ್ತದೆ. ಕಳೆದ ವರ್ಷ ಈ ಸಂದರ್ಭದಲ್ಲಿ 4429 ವಿಶೇಷ ರೈಲುಗಳು ಕಾರ್ಯಾಚರಣೆ ನಡೆಸಿದ್ದು, ಈ ವರ್ಷ ಒಟ್ಟು 5975 ವಿಶೇಷ ರೈಲುಗಳು ಸಂಚರಿಸಲಿವೆ ಎಂದು ತಿಳಿಸಿದ್ದಾರೆ.