ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡುವ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಕಾರ್ಸ್ 24, 600 ಉದ್ಯೋಗಿಗಳಿಗೆ ರಾಜೀನಾಮೆ ನೀಡುವಂತೆ ಸೂಚಿಸಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ವಹಿವಾಟು ವಿಸ್ತರಿಸಲು ಯೋಜನೆ ಹಾಕಿಕೊಂಡಿರೋ ಈ ಕಂಪನಿ ದಿಢೀರನೆ 600 ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕ್ತಿರೋದು ಆಘಾತಕಾರಿಯಾಗಿದೆ.
ಕಾರ್ಸ್ 24ನಲ್ಲಿ ಸುಮಾರು 9000 ಉದ್ಯೋಗಿಗಳು ಕೆಲಸ ಮಾಡ್ತಿದ್ದಾರೆ. ಸಾಫ್ಟ್‌ಬ್ಯಾಂಕ್ ಮತ್ತು ಆಲ್ಫಾ ವೇವ್ ಇನ್ನೋವೇಶನ್‌ನಂತಹ ಅನುಭವಿ ಹೂಡಿಕೆದಾರರು ಈದನ್ನು ಬೆಂಬಲಿಸಿದ್ದಾರೆ. ಆದರೂ ಕಂಪನಿ ಒಟ್ಟಿಗೆ ಇಷ್ಟೊಂದು ಜನರಿಂದ ಕೆಲಸ ಕಸಿದುಕೊಳ್ತಾ ಇದೆ.
ಆದ್ರೆ ವಜಾ ಎಂದು ಪರಿಗಣಿಸಲು ಕಾರ್ಸ್ 24 ನಿರಾಕರಿಸಿದೆ. ಇದು ಸಾಮಾನ್ಯ ಪ್ರಕ್ರಿಯೆ, ನೌಕರರನ್ನು ಕೆಲಸದಿಂದ ವಜಾ ಮಾಡ್ತಿರೋದು ಕಾರ್ಯಕ್ಷಮತೆಗೆ ಸಂಬಂಧಿಸಿದ್ದು ಎಂದು ಸಮರ್ಥಿಸಿಕೊಂಡಿದೆ. ಈ ಪ್ರಕ್ರಿಯೆಯನ್ನು ಪ್ರತಿ ವರ್ಷ ಅನುಸರಿಸಲಾಗುತ್ತದೆ ಅಂತಾನೂ ಹೇಳಿದೆ. ವರದಿಗಳ ಪ್ರಕಾರ ವಜಾಗೊಂಡ ಎಲ್ಲಾ ಉದ್ಯೋಗಿಗಳು ಭಾರತ ಮೂಲದವರು. ಎಲ್ಲರೂ ಜೂನಿಯರ್ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
2015 ರಲ್ಲಿ ಸ್ಥಾಪಿತವಾದ ಕಾರ್ಸ್24 ಮೂಲಕ ಗ್ರಾಹಕರು ತಮ್ಮ ಕಾರುಗಳನ್ನು ಖರೀದಿ, ಮಾರಾಟ ಮಾಡಬಹುದು. Cars24 ಈಕ್ವಿಟಿ ಮೂಲಕ 300 ಮಿಲಿಯನ್ ಡಾಲರ್ ಮತ್ತು ಹೆಚ್ಚುವರಿ 100 ಮಿಲಿಯನ್ ಡಾಲರ್ ಹಣವನ್ನು ಡಿಸೆಂಬರ್‌ನಲ್ಲಿ ಸಂಗ್ರಹಿಸಿದೆ. ಆ ಸಮಯದಲ್ಲಿ ಕಂಪನಿಯ ಮೌಲ್ಯ 3.3 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಮತ್ತೊಂದೆಡೆ ಶಿಕ್ಷಣ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಕಂಪನಿ ವೇದಾಂತು ಕೂಡ ‘ಆರ್ಥಿಕ ಹಿಂಜರಿತ’ದ ಭಯವನ್ನು ಉಲ್ಲೇಖಿಸಿ 424ಕ್ಕೂ ಹೆಚ್ಚಿನ ಉದ್ಯೋಗಿಗಳನ್ನು ವಜಾ ಮಾಡಿದೆ. ವೇದಾಂತು, 15 ದಿನಗಳ ಹಿಂದೆ 200 ಉದ್ಯೋಗಿಗಳನ್ನು ವಜಾಗೊಳಿಸಿತ್ತು.