ಚೆನ್ನೈ: ಕೇಂದ್ರ ಗೃಹಸಚಿವ ಅಮಿತ್ ಶಾ ತಮಿಳುನಾಡಿಗೆ ಭೇಟಿ ನೀಡಿದ್ದಾರೆ. ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಅವರು ಜನರತ್ತ ಕೈಬೀಸುತ್ತಾ ನಡೆದುಕೊಂಡು ಹೋಗುವಾಗ ವ್ಯಕ್ತಿಯೊಬ್ಬ ಅವರ ಮೇಲೆ ಭಿತ್ತಿಪತ್ರ ಎಸೆದಿದ್ದಾನೆ.
ಚೆನ್ನೈ ವಿಮಾನ ನಿಲ್ದಾಣದಿಂದ ಹೊರ ಬಂದ ಅಮಿತ್ ಶಾ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಬೆಂಬಲಿಗರನ್ನು ಗಮನಿಸಿ ನಡೆದುಕೊಂಡೇ ಅವರತ್ತ ಸಾಗಿದ್ದಾರೆ. ಈ ವೇಳೆ 60 ವರ್ಷದ ದೊರೆರಾಜು ಎಂಬಾತ ಪ್ಲೇ ಕಾರ್ಡನ್ನು ಅವರ ಮೇಲೆ ಎಸೆದಿದ್ದಾನೆ. ಆದರೆ, ಭದ್ರತಾ ಸಿಬ್ಬಂದಿ ಆತನ ಪ್ರಯತ್ನವನ್ನು ತಡೆದಿದ್ದಾರೆ. ಅಮಿತ್ ಶಾ ಅವರಿಂದ ಸ್ವಲ್ಪ ದೂರದಲ್ಲಿ ಪ್ಲೇ ಕಾರ್ಡ್ ಬಿದ್ದಿದೆ.
ತಮ್ಮನ್ನು ಸ್ವಾಗತಿಸಲು ಬಂದಿದ್ದ ಜನರನ್ನು ಕಂಡು ಖುಷಿಯಾದ ಅಮಿತ್ ಶಾ ಜನರಿಗೆ ಧನ್ಯವಾದ ಹೇಳಿದ್ದಾರೆ. ಹೀಗೆ ಕೈಬೀಸುತ್ತಾ ಅವರು ನಡೆಯುತ್ತಿದ್ದಂತೆ ನಂಗನಲ್ಲೂರಿನ ದೊರೆರಾಜು ಪ್ಲೇಕಾರ್ಡ್ ಎಸೆದಿದ್ದಾನೆ. ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇಷ್ಟೆಲ್ಲಾ ನಡೆದರೂ ವಿಚಾರ ಅಮಿತ್ ಶಾ ಗಮನಕ್ಕೆ ಬಂದಿಲ್ಲವೆನ್ನಲಾಗಿದ್ದು, ಬಿಜೆಪಿ ಅಧ್ಯಕ್ಷ ಎಲ್. ಮುರುಗನ್ ಪೊಲೀಸ್ ಸಿಬ್ಬಂದಿ ಬಳಿ ಈ ಬಗ್ಗೆ ವಿಚಾರಿಸಿದ್ದಾರೆ.