
ಬೆಂಗಳೂರು: ರಾಜ್ಯದಲ್ಲಿ ಒಂದನೇ ತರಗತಿ ಪ್ರವೇಶಕ್ಕೆ ಮಕ್ಕಳಿಗೆ 6 ವರ್ಷ ಕಡ್ಡಾಯವಾಗಿ ಪೂರ್ಣಗೊಂಡಿರಬೇಕು ಎನ್ನುವ ನಿಯಮವನ್ನು ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತರುವಂತೆ ಕೇಂದ್ರ ಸರ್ಕಾರ ಪತ್ರ ಬರೆದಿದೆ. ಮುಂದಿನ ವರ್ಷದಿಂದ ಜಾರಿಗೆ ತರುವುದಾಗಿ ರಾಜ್ಯ ಸರ್ಕಾರ ಆದೇಶಿಸಿದೆ.
ಈ ವಿಚಾರವೀಗ ಒಂದನೇ ತರಗತಿ ಮಕ್ಕಳ ಪ್ರವೇಶಕ್ಕೆ ಪೋಷಕರ ವಲಯದಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರ ಕೆಲವು ದಿನಗಳ ಹಿಂದೆ ಎಲ್ಲಾ ರಾಜ್ಯಗಳು, ಕೇಂದ್ರ ಆಡಳಿತ ಪ್ರದೇಶಗಳ ಶಿಕ್ಷಣ ಇಲಾಖೆಗಳಿಗೆ ಪತ್ರ ಕಳುಹಿಸಿ ಎನ್ಇಪಿಗೆ ಹೊಂದಿಸಲು ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ವಯಸ್ಸು ಆರು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟು ಇರಬೇಕು ಎನ್ನುವ ನಿಯಮವನ್ನು ಮುಂಬರುವ ಶೈಕ್ಷಣಿಕ ಸಾಲಿನಿಂದಲೇ ಜಾರಿಗೆ ಸೂಚನೆ ನೀಡಿದೆ.
ರಾಜ್ಯ ಸರ್ಕಾರ 2022ರ ನವೆಂಬರ್ 15ರಂದು ಆದೇಶ ಹೊರಡಿಸಿ 2025-26ನೇ ಸಾಲಿನಿಂದ ಅನ್ವಯವಾಗುವಂತೆ ಆಯಾ ಶೈಕ್ಷಣಿಕ ವರ್ಷದ ಜೂನ್ 1ನೇ ತಾರೀಖಿಗೆ ಕಡ್ಡಾಯವಾಗಿ ಆರು ವರ್ಷ ಪೂರ್ಣಗೊಂಡಿರುವ ಮಗುವನ್ನು ಮಾತ್ರ ಒಂದನೇ ತರಗತಿಗೆ ದಾಖಲಿಸಲು ವಯೋಮಿತಿ ನಿಗದಿಪಡಿಸಿದೆ.