ಹೆಲೆನಾ, ಮೊಂಟಾನಾ: ಶಾಲಾ ದಿನಗಳು ಅಥವಾ ಕಾಲೇಜು ದಿನಗಳ ಸ್ನೇಹಿತರು ಎಷ್ಟೋ ವರುಷಗಳ ಬಳಿಕ ರೀ ಯುನೈಟ್ (ಮತ್ತೆ ಸೇರಿಕೊಳ್ಳುವುದು) ಆಗುವುದನ್ನು ಕೇಳಿದ್ದೀರಿ ಅಲ್ವಾ..? ಆದರೆ, ಕಳೆದು ಹೋದ ಆಟದ ಗೊಂಬೆ ವರುಷದ ನಂತರ ಮತ್ತೆ ಸೇರುವುದನ್ನು ಎಂದಾದ್ರೂ ಕೇಳಿದ್ದೀರಾ..? ಹಾಗಿದ್ರೆ ಈ ಸ್ಟೋರಿ ಓದಿದ್ರೆ, ನಿಮ್ಗೆ ಖಂಡಿತಾ ಅಚ್ಚರಿಯಾಗುವುದರಲ್ಲಿ ಸಂಶಯವೇ ಇಲ್ಲ.
ಇಥಿಯೋಪಿಯಾದ ಅನಾಥಾಶ್ರಮದಿಂದ ಪುಟ್ಟ ಬಾಲಕಿಯನ್ನು ದತ್ತು ಪಡೆದ ನಂತರ ಆಕೆಗೆ ಹೊಸ ಪೋಷಕರು ಟೆಡ್ಡಿಬೇರ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ, ಕಳೆದ ವರ್ಷ ಗ್ಲೇಸಿಯರ್ ರಾಷ್ಟ್ರೀಯ ಉದ್ಯಾನವನದಲ್ಲಿ ಬಾಲಕಿ ನವೋಮಿ ಪ್ಯಾಸ್ಕಲ್ ತನ್ನ ಟೆಡ್ಡಿಬೇರ್ ಅನ್ನು ಕಳೆದುಕೊಂಡಿದ್ದಾಳೆ. ಇದರಿಂದ ಟೆಡ್ಡಿಬೇರ್ ಕಳೆದೇ ಹೋಯ್ತು ಅಂತಾ ಆಕೆ ಬೇಸರದಲ್ಲಿ ಕೂತಿದ್ದಳು.
ಇನ್ನು ಬಾಲಕಿಯ ಹೊಸ ಕುಟುಂಬ ಸದಸ್ಯರು ಮಾತ್ರ ಭರವಸೆಯನ್ನು ಕಳೆದುಕೊಳ್ಳಲಿಲ್ಲ. ತಮ್ಮಿಂದಾದಷ್ಟು ಹುಡುಕಾಟ ನಡೆಸಿದ್ದಾರೆ. ಅಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲೂ ಈ ಬಗ್ಗೆ ಪ್ರಕಟಿಸಿದ್ದಾರೆ.
ಇತ್ತ ಟೆಡ್ಡಿ ಬೇರ್ ಬಿದ್ದ ಜಾಗದಲ್ಲಿ ಪಾರ್ಕ್ ರೇಂಜರ್‌ಗಳು ಶುಚಿಗೊಳಿಸುತ್ತಿದ್ದರು. ಈ ವೇಳೆ ಗಲೀಜಾಗಿ ಸಿಕ್ಕ ಟೆಡ್ಡಿಬೇರ್ ಅನ್ನು ಎಸೆಯಲು ಮುಂದಾಗಿದ್ದಾರೆ. ಅದು ಹಿಮದಲ್ಲಿ ಹೂತು ಹೋಗಿತ್ತು. ಆದರೆ, ರೇಂಜರ್ ಟಾಮ್ ಎಂಬುವವರು ಅದನ್ನು ಎಸೆಯಲು ಮನಸ್ಸು ಮಾಡದೆ, ಶುಚಿಗೊಳಿಸಿ ತನ್ನ ಬಳಿ ಇಟ್ಟುಕೊಂಡಿದ್ದರು. ಅದಕ್ಕೆ ಸೀಸರ್ ಎಂಬ ಹೆಸರನ್ನೂ ಕೂಡ ಇಟ್ಟಿದ್ದಾರೆ.
ಸೆಪ್ಟೆಂಬರ್‌ನಲ್ಲಿ, ನವೋಮಿ ಅವರ ಕುಟುಂಬದ ಸ್ನೇಹಿತ ಟೆರ್ರಿ ಹೇಡನ್ ಉದ್ಯಾನವನಕ್ಕೆ ಹಿಂತಿರುಗಿದ್ದಾರೆ. ಈ ವೇಳೆ ಕರಡಿಯು ಉದ್ಯಾನವನದ ಟ್ರಯಲ್ ಹೆಡ್ ನಲ್ಲಿ ಗಸ್ತು ವಾಹನದಲ್ಲಿ ಕುಳಿತಿರುವುದನ್ನು ಗಮನಿಸಿದ್ದು, ನವೋಮಿಯದ್ದೆ ಟೆಡ್ಡಿ ಎಂದು ಅವರು ಅಂದಾಜಿಸಿದ್ದಾರೆ. ಕೂಡಲೇ ಅದರ ಬಗ್ಗೆ ವಿಚಾರಿಸಿ ನವೋಮಿಗೆ ಟೆಡ್ಡಿಬೇರ್ ಅನ್ನು ವಾಪಸ್ ಮಾಡಿದ್ದಾರೆ.
ಇನ್ನು ರೇಂಜರ್ ಟಾಮ್ ಅವರಿಗೆ ಹೊಸ ಕ್ಲೋವರ್ ಎಂದು ಹೆಸರಿಸಲಾದ ಹೊಸ ಟೆಡ್ಡಿಬೇರ್ ಅನ್ನು ನೀಡುವ ಮುಖಾಂತರ ಅವರನ್ನು ಅಭಿನಂದಿಸಿದೆ.