
ನ್ಯೂಯಾರ್ಕ್ – ದೆಹಲಿ ನಡುವೆ ಸಂಚರಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹಿರಿಯ ಮಹಿಳೆಯ ಮೇಲೆ ಮೂತ್ರ ವಿಸರ್ಜಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಇಂದು ಬಂಧನಕ್ಕೊಳಗಾಗಿದ್ದ ಮುಂಬೈ ಮೂಲದ ಶಂಕರ್ ಮಿಶ್ರಾನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಪೊಲೀಸರು ದೆಹಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಕೋರಿದ್ದು, ಆದರೆ ಆರೋಪಿ ಪರ ವಕೀಲರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಬಳಿಕ ಶಂಕರ್ ಮಿಶ್ರಾನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಈ ಘಟನೆ ಕಳೆದ ನವೆಂಬರ್ ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿತ್ತು. ಆ ಬಳಿಕ ಆರೋಪಿ ಶಂಕರ್ ಮಿಶ್ರಾ ತಲೆಮರೆಸಿಕೊಂಡಿದ್ದು, ಆತ ಬಳಸಿದ ಕ್ರೆಡಿಟ್ ಕಾರ್ಡ್ ಜಾಡು ಹಿಡಿದ ಪೊಲೀಸರು ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಬಂಧಿಸಿದ್ದರು.