ಕೊರೊನಾ ಹೊಸ ರೂಪಾಂತರ ಒಮಿಕ್ರಾನ್ ಸದ್ಯ ಎಲ್ಲರ ತಲೆನೋವಿಗೆ ಕಾರಣವಾಗಿದೆ. ಮಹಾರಾಷ್ಟ್ರದಲ್ಲಿ, ದಕ್ಷಿಣ ಆಫ್ರಿಕಾ ಮತ್ತು ಇತರ ದೇಶಗಳಿಂದ ಬಂದ 6 ಪ್ರಯಾಣಿಕರಿಗೆ ಕೊರೊನಾ ವೈರಸ್ ಸೋಂಕು ಕಂಡು ಬಂದಿದೆ. ಒಮಿಕ್ರಾನ್ ಸುದ್ದಿಯಲ್ಲಿರುವಾಗ, ವಿದೇಶದಿಂದ ಬಂದ ಪ್ರಯಾಣಿಕರಿಗೆ ಕೊರೊನಾ ಕಂಡು ಬಂದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಸ್ಥಳೀಯ ಆಡಳಿತ ಈ ಬಗ್ಗೆ ಎಚ್ಚರಿಕೆ ಹೆಜ್ಜೆಯಿಡುತ್ತಿದೆ.
ಮುಂಬೈ, ಕಲ್ಯಾಣ್-ಡೊಂಬಿವಲಿ, ಮೀರಾ ಭಯಂದರ್ ಮತ್ತು ಪುಣೆಯಲ್ಲಿ ತಲಾ 1 ಮತ್ತು ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ನೈಜೀರಿಯಾದಿಂದ ಹಿಂದಿರುಗಿದ ಇಬ್ಬರಿಗೆ ಕೊರೊನಾ ಕಾಣಿಸಿಕೊಂಡಿದೆ. ಇವರೆಲ್ಲರ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದ್ದು, ಅವರ ಸಂಪರ್ಕಗಳನ್ನು ಪತ್ತೆ ಮಾಡಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ. ಸೋಂಕಿನ ಲಕ್ಷಣಗಳು ಸೌಮ್ಯವಾಗಿವೆ ಎಂದು ಇಲಾಖೆ ಹೇಳಿದೆ.
ಕೊರೊನಾ ವೈರಸ್ ಹೊಸ ರೂಪಾಂತರ ಒಮಿಕ್ರಾನ್ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿದೆ. ಈಗಾಗಲೇ ಎಲ್ಲ ರಾಜ್ಯಗಳಿಗೂ ಸಲಹೆ ರವಾನೆ ಮಾಡಿದೆ. ಸೂಕ್ತ ಕ್ರಮಕೈಗೊಳ್ಳುವಂತೆ ರಾಜ್ಯಗಳಿಗೆ ಸೂಚನೆ ನೀಡಿದೆ. ಇದೇ ವೇಳೆ ದೇಶದಲ್ಲಿ ಒಮಿಕ್ರಾನ್ ಯಾವುದೇ ಪ್ರಕರಣ ಪತ್ತೆಯಾಗಿಲ್ಲವೆಂದು ಕೇಂದ್ರ ಸರ್ಕಾರ ಹೇಳಿದೆ.