ಚೆಂಗಲ್ಪಟ್ಟು: ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಮಧುರಾಂತಕದಲ್ಲಿ ಇಂದು ಮುಂಜಾನೆ ಅಪಘಾತ ಸಂಭವಿಸಿ 6 ಜನ ಸಾವನ್ನಪ್ಪಿದ್ದಾರೆ. ಭೀಕರ ಅಪಘಾತದಲ್ಲಿ 2 ಟ್ರಕ್‌ಗಳ ನಡುವೆ ಸಿಲುಕಿ ಟಾಟಾ ಏಸ್ ವಾಹನದಲ್ಲಿದ್ದ 6 ಪ್ರಯಾಣಿಕರು ನಜ್ಜುಗುಜ್ಜಾಗಿ ಸಾವನ್ನಪ್ಪಿದ್ದಾರೆ.
ತಿರುವಣ್ಣಾಮಲೈ ಕಾರ್ತಿಕೈ ದೀಪಾವಳಿಗೆ ಹೋಗಿ ಟಾಟಾ ಏಸ್ ವಾಹನದಲ್ಲಿ ಮನೆಗೆ ಮರಳುತ್ತಿದ್ದಾಗ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಚೆಂಗಲ್ಪಟ್ಟು ಜಿಲ್ಲೆಯ ಮಧುರಾಂಡಕಂ ಬಳಿ ಚೆನ್ನೈ-ತಿರುಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಾಟಾ ಏಸ್(ಸರಕು ವಾಹನ) ಚೆನ್ನೈ ಕಡೆಗೆ ಹೋಗುತ್ತಿತ್ತು. ಚೆಂಗಲ್ಪಟ್ಟು ಜಿಲ್ಲೆಯ ಮದುರಾಂಡಕಂ ಪಕ್ಕದಲ್ಲಿರುವ ಜಾನಕಿಪುರಂಗೆ ವಾಹನ ತೆರಳುತ್ತಿತ್ತು. ಎದುರಿಗೆ ಬಂದ ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ. ಅಷ್ಟರಲ್ಲಿ ಹಿಂದೆ ಬರುತ್ತಿದ್ದ ಮತ್ತೊಂದು ಲಾರಿ ನಿಯಂತ್ರಣ ತಪ್ಪಿ ಅದಾಗಲೇ ಅಪಘಾತಕ್ಕೀಡಾದ ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಎರಡು ಲಾರಿಗಳ ನಡುವೆ ಟಾಟಾ ಏಸ್ ವಾಹನ ಸಿಲುಕಿ ನಜ್ಜುಗುಜ್ಜಾಗಿದೆ.
15 ಮಂದಿ ಪ್ರಯಾಣಿಸುತ್ತಿದ್ದ ಟಾಟಾ ಏಸ್ ನಲ್ಲಿದ್ದ 6 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಮೃತರ ಶವಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಚೆಂಗಲ್ಪಟ್ಟು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.