ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ “ಉಪ ಕಮಾಂಡರ್” ಪುಣೆಂ ನಾಗೇಶ್, ಅವರ ಪತ್ನಿ ಮತ್ತು ಇನ್ನೊಬ್ಬ ಮಹಿಳಾ ಕೇಡರ್ ಸೇರಿದಂತೆ ಆರು ನಕ್ಸಲೀಯರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುಂಡಿನ ಚಕಮಕಿಯಲ್ಲಿ ಇತರ ಹಲವು ನಕ್ಸಲೀಯರು ಗಾಯಗೊಂಡಿದ್ದಾರೆ. ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ, ಯಾವುದೇ ಭದ್ರತಾ ಸಿಬ್ಬಂದಿ ಗಾಯಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.
ಮಾವೋವಾದಿಗಳ ಪಿಎಲ್‌ಜಿಎ ಪ್ಲಟೂನ್‌ನ ಉಪ ಕಮಾಂಡರ್ ಪುಣೆಂ ನಾಗೇಶ್ ಈ ಹಿಂದೆ ಭದ್ರತಾ ಪಡೆಗಳ ಮೇಲೆ ಹಲವಾರು ಮಾರಣಾಂತಿಕ ದಾಳಿಗಳನ್ನು ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಬೆಳಿಗ್ಗೆ 8 ಗಂಟೆ ಸುಮಾರಿಗೆ ಬಸಗುಡ ಪೊಲೀಸ್ ಠಾಣಾ ವ್ಯಾಪ್ತಿಯ ಚಿಪುರಭಟ್ಟಿ ಗ್ರಾಮದ ಬಳಿಯ ತಲಪೇರು ನದಿಯ ದಂಡೆಯಲ್ಲಿ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಗುಂಡಿನ ಚಕಮಕಿ ನಡೆದಿದೆ. ಸುಮಾರು ಒಂದು ಗಂಟೆಗಳ ಕಾಲ ಗುಂಡಿನ ಚಕಮಕಿ ಮುಂದುವರೆದಿದೆ, ನಂತರ ಆರು ನಕ್ಸಲೀಯರ ಶವಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮಹಾನಿರೀಕ್ಷಕ(ಬಸ್ತರ್ ರೇಂಜ್) ಸುಂದರರಾಜ್ ಪಿ. ತಿಳಿಸಿದರು.
ಎನ್ ಕೌಂಟರ್ ನಡೆದ ಸ್ಥಳದಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಪತ್ತೆಯಾಗಿವೆ. ಒಂದು ಕಾರ್ಬೈನ್ ಗನ್, 9 ಎಂಎಂ ಪಿಸ್ತೂಲ್, ಕಂಟ್ರಿ ಮೇಡ್ 9 ಎಂಎಂ ಪಿಸ್ತೂಲ್, 12 ಬೋರ್ ಗನ್, ಲೋಡಿಂಗ್ ಗನ್, ಎಸ್‌ಎಲ್‌ಆರ್‌ನ 10 ಲೈವ್ ಕಾರ್ಟ್ರಿಡ್ಜ್ ಗಳು, ಎರಡು ಟಿಫಿನ್ ಬಾಂಬ್ ಗಳು, ಜಿಲೆಟಿನ್ ಸ್ಟಿಕ್ ಗಳು, ಫ್ಯೂಸ್ ಗಳು, ಮಾವೋವಾದಿಗಳ ಬ್ಯಾಗ್‌ಗಳು, ಔಷಧಗಳು ಮತ್ತು ಇತರ ದಿನಬಳಕೆಯ ವಸ್ತುಗಳನ್ನು ಕೂಡ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಐಜಿಪಿ ತಿಳಿಸಿದ್ದಾರೆ.
ಹತ್ಯೆಯಾದ ನಕ್ಸಲೀಯರನ್ನು ಪುಣೆಂ ನಾಗೇಶ್, ಅವರ ಪತ್ನಿ ವೆಟ್ಟಿ ಸೋನಿ (30), ಆಯ್ತು ಪುಣೆಂ (28), ಸುಕ್ಕಾ ಓಯಂ (40), ನುಪ್ಪೋ ಮೋಕಾ (30), ಮತ್ತು ಕೊವಾಸಿ ಗಂಗಿ (27) ಎಂದು ಗುರುತಿಸಲಾಗಿದೆ ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಯಾದವ್ ತಿಳಿಸಿದ್ದಾರೆ. .
ನಾಗೇಶ್ ಅವರು ಮಾವೋವಾದಿಗಳ ಪಿಎಲ್‌ಜಿಎ ಪ್ಲಟೂನ್ ನಂ.10ರ ಉಪ ಕಮಾಂಡರ್ ಆಗಿ ಸಕ್ರಿಯರಾಗಿದ್ದರು. ಅವರ ಪತ್ನಿ ಕೂಡ ಅದೇ ರಚನೆಯ ಸದಸ್ಯರಾಗಿದ್ದರು. ಅವರ ಸುಳಿವು ನೀಡಿದವರಿಗೆ ಮೇಲೆ 5 ಲಕ್ಷ ರೂ.ಮತ್ತು 2 ಲಕ್ಷ ರೂ ಬಹುಮಾನ ಘೋಷಿಸಲಾಗಿತ್ತು.
ಗಂಗಿ ಮಾವೋವಾದಿಗಳ ಪ್ರದೇಶ ಸಮಿತಿ ಸದಸ್ಯೆಯಾಗಿದ್ದು, ಆಕೆಯ ತಲೆಯ ಮೇಲೆ 5 ಲಕ್ಷ ರೂಪಾಯಿ ಬಹುಮಾನ ಇತ್ತು.