ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ಆಂಧ್ರಪ್ರದೇಶದ ತಿರುಪತಿಯಲ್ಲಿರುವ ವೈಕುಂಠ ದ್ವಾರ ದರ್ಶನ ಟಿಕೆಟ್ ಖರೀದಿಸುವ ಕೇಂದ್ರಗಳ ಬಳಿ ಕಾಲ್ತುಳಿತ ಸಂಭವಿಸಿ ಆರು ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. 4,000 ಕ್ಕೂ ಹೆಚ್ಚು ಭಕ್ತರು ಮತ್ತು 10 ದಿನಗಳ ವಿಶೇಷ ದರ್ಶನಕ್ಕಾಗಿ ಟೋಕನ್ ಪಡೆಯಲು ಭಾರಿ ಜನಸಂದಣಿ ಇದ್ದಾಗ ಈ ಕಾಲ್ತುಳಿತ ಸಂಭವಿಸಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತಾವು “ತೀವ್ರವಾಗಿ ವಿಚಲಿತರಾಗಿದ್ದೇವೆ” ಗಾಯಗೊಂಡವರಿಗೆ ಸರಿಯಾದ ಪರಿಹಾರ ಕ್ರಮಗಳನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ತಿರುಮಲ ತಿರುಪತಿ ದೇವಸ್ಥಾನಗಳು(ಟಿಟಿಡಿ) ಏರ್ಪಡಿಸಿದ ವೈಕುಂಠ ಏಕಾದಶಿ ಮತ್ತು ವೈಕುಂಠ ದ್ವಾರ ದರ್ಶನವನ್ನು ಜನವರಿ 10 ರಿಂದ ಜನವರಿ 19 ರವರೆಗೆ ನಿಗದಿಪಡಿಸಲಾಗಿದೆ.
ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯ ಅಧ್ಯಕ್ಷ ಬಿ.ಆರ್. ನಾಯ್ಡು ಅವರು ಪ್ರಸ್ತುತ ತುರ್ತು ಸಭೆ ನಡೆಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರಿಗೆ ನೀಡಲಾಗುತ್ತಿರುವ ಚಿಕಿತ್ಸೆಯ ಕುರಿತು ಮುಖ್ಯಮಂತ್ರಿ ನಾಯ್ಡು ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ.
ಮುಖ್ಯಮಂತ್ರಿಗಳು ಇಂದು ತಿರುಪತಿಗೆ ಭೇಟಿ ನೀಡಿ ಗಾಯಾಳುಗಳನ್ನು ಭೇಟಿ ಮಾಡಲಿದ್ದಾರೆ. ಘಟನೆ ನಡೆದ ಸ್ಥಳವಾದ ಟಿಟಿಡಿ ಟೋಕನ್ ಕೌಂಟರ್‌ಗಳ ನಿರ್ವಹಣೆ ಮತ್ತು ಭದ್ರತೆಯನ್ನು ಸಹ ಅವರು ಪರಿಶೀಲಿಸಲಿದ್ದಾರೆ.
ಏತನ್ಮಧ್ಯೆ, ಜಿಲ್ಲಾಧಿಕಾರಿ ಡಾ. ಎಸ್. ವೆಂಕಟೇಶ್ವರ್ ಮತ್ತು ಜೆಸಿ ಶುಭಂ ಬನ್ಸಾಲ್ ತಕ್ಷಣ ರುಯಾ ಆಸ್ಪತ್ರೆಗೆ ತಲುಪಿ, ಪರಿಸ್ಥಿತಿಯನ್ನು ಪರಿಶೀಲಿಸಿದರು ಮತ್ತು ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಕ್ರಮ ಕೈಗೊಂಡರು.
ಅಲ್ಲದೆ, ಟಿಟಿಡಿ ಇಒ ಶ್ಯಾಮಲಾ ರಾವ್, ಟಿಟಿಡಿ ಜೆಇಒ ಗೌತಮಿ, ವೀರಬ್ರಹ್ಮಂ, ಶಾಸಕ ಅರಣಿ ಶ್ರೀನಿವಾಸುಲು, ಟಿಟಿಡಿ ಸದಸ್ಯ ಭಾನು ಪ್ರಕಾಶ್ ರೆಡ್ಡಿ ಮತ್ತು ಇತರರು ಗಾಯಾಳುಗಳ ಸ್ಥಿತಿಯನ್ನು ಪರಿಶೀಲಿಸಲು ರುಯಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.