![](https://kannadadunia.com/wp-content/uploads/2023/09/Accident-in-tamilnadu.jpg)
ತಮಿಳುನಾಡಿನ ಸೇಲಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. ತಮಿಳುನಾಡಿನ ಸೇಲಂ-ಈರೋಡ್ ಹೆದ್ದಾರಿಯಲ್ಲಿ ಬುಧವಾರ ಮುಂಜಾನೆ 4 ಗಂಟೆ ಸುಮಾರಿಗೆ ವೇಗವಾಗಿ ಚಲಿಸುತ್ತಿದ್ದ ವ್ಯಾನ್ ನಿಯಂತ್ರಣ ಕಳೆದುಕೊಂಡು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಅಪಘಾತದ ಸಮಯದಲ್ಲಿ ವ್ಯಾನ್ ನಲ್ಲಿ ಎಂಟು ಜನರಿದ್ದರು. ಇಂಗೂರಿನಿಂದ ಎಂಟು ಜನರು ವ್ಯಾನ್ ನಲ್ಲಿ ಪೆರುಂತುರೈ ಕಡೆಗೆ ಹೋಗುತ್ತಿದ್ದರು. ಮೃತರನ್ನು ಸೆಲ್ವರಾಜ್, ಮಂಜುಳಾ, ಆರ್ಮುಗಂ, ಪಳನಿಸ್ವಾಮಿ, ಪಾಪತಿ ಮತ್ತು ಒಂದು ವರ್ಷದ ಮಗು ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ವ್ಯಾನ್ ಚಾಲಕ ವಿಘ್ನೇಶ್ ಮತ್ತು ಇನ್ನೊಬ್ಬ ಪ್ರಯಾಣಿಕ ಪ್ರಿಯಾ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಪಘಾತದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.