ಉತ್ತರ ಪ್ರದೇಶದ ಮಥುರಾದಲ್ಲಿ ವಿಚಿತ್ರ ರೀತಿಯ ಜ್ವರ ಕಾಣಿಸಿಕೊಂಡಿದ್ದು ಕಳೆದ 1 ವಾರದಲ್ಲಿ ಕೋನ್ ಎಂಬ ಗ್ರಾಮದಲ್ಲಿ ಐವರು ಮಕ್ಕಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮಥುರಾ, ಆಗ್ರಾದ ವಿವಿಧ ಆಸ್ಪತ್ರೆಯಲ್ಲಿ ಈವರೆಗೆ 80ಕ್ಕೂ ಅಧಿಕ ಮಂದಿ ದಾಖಲಾಗಿದ್ದಾರೆ. ಆರೋಗ್ಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಸೋಮವಾರ ಇದೇ ಜ್ವರದಿಂದ 9 ವರ್ಷದ ಸೇವಕ್ ಹಾಗೂ 6 ವರ್ಷದ ಹನಿ ಎಂಬ ಮಕ್ಕಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.
ಈ ಮಕ್ಕಳು ಅತಿಯಾದ ಜ್ವರದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನುಳಿದಂತೆ ರುಚಿ(19), ಅವಿನಾಶ್(9) ರೋಮಿಯಾ(2) ಜಾಗೂ ರೇಖಾ(1) ಕೂಡ ಮೃತಪಟ್ಟಿದ್ದು ಇವರಲ್ಲೂ ಇದೇ ರೀತಿಯ ರೋಗ ಲಕ್ಷಣಗಳು ಕಂಡುಬಂದಿದ್ದವು ಎನ್ನಲಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಆರೋಗ್ಯ ಇಲಾಖೆ ಮುಖ್ಯಸ್ಥೆ ಡಾ. ರಚನಾ ಗುಪ್ತಾ, ಈಗಾಗಲೇ ವೈದ್ಯರ ತಂಡ ಗ್ರಾಮಕ್ಕೆ ಭೇಟಿ ನೀಡಿದ್ದು ಸ್ಯಾಂಪಲ್ಗಳನ್ನು ಕಲೆ ಹಾಕಿದೆ. ಮಲೇರಿಯಾ, ಡೆಂಗ್ಯೂ ಹಾಗೂ ಕೋವಿಡ್ ಇರಬಹುದೇ ಎಂಬ ಬಗ್ಗೆಯೂ ಹೆಚ್ಚಿನ ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದ್ರು. ಈ ಸಾವಿಗೆ ಇನ್ನೂ ನಿಖರವಾದ ಕಾರಣ ತಿಳಿದುಬಂದಿಲ್ಲ. ಮೃತರಲ್ಲಿ ರಕ್ತಕಣಗಳ ಕೊರತೆ ಕಂಡು ಬಂದಿರೋದ್ರಿಂದ ಡೆಂಗ್ಯೂ ಇರಬಹುದೇ ಎಂದು ಶಂಕಿಸಲಾಗಿದೆ.