ನಾಗ್ಪುರ: ನಾಗ್ಪುರ ನಗರದ ಬಳಿಯ ಸ್ಫೋಟಕ ತಯಾರಿಕಾ ಕಾರ್ಖಾನೆಯಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದ ಸ್ಫೋಟದಲ್ಲಿ ಐವರು ಮಹಿಳೆಯರು ಸೇರಿದಂತೆ ಆರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿಂದ ಸುಮಾರು 25 ಕಿ.ಮೀ. ದೂರದ ಹಿಂಗ್ನಾ ಪೊಲೀಸ್ ಠಾಣೆ ವ್ಯಾಪ್ತಿಯ ಧಮ್ನಾ ಗ್ರಾಮದ ಚಾಮುಂಡಿ ಎಕ್ಸ್‌ಪ್ಲೋಸಿವ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಮಧ್ಯಾಹ್ನ ಘಟನೆ ನಡೆದಿದೆ. ,
ಒಟ್ಟು ಒಂಬತ್ತು ಗಾಯಾಳುಗಳನ್ನು ನಗರದ ಎರಡು ಖಾಸಗಿ ಆಸ್ಪತ್ರೆಗಳಿಗೆ ಕರೆತರಲಾಗಿದೆ ಎಂದು ನಾಗ್ಪುರ ಪೊಲೀಸ್ ಕಮಿಷನರ್ ರವೀಂದ್ರ ಸಿಂಘಾಲ್ ತಿಳಿಸಿದ್ದಾರೆ. ಅವರಲ್ಲಿ ಐವರು ಮಹಿಳೆಯರು ಮತ್ತು ಓರ್ವ ಪುರುಷ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.
ಸ್ಫೋಟ ಸಂಭವಿಸಿದಾಗ ಹೆಚ್ಚಿನವರು ಕಾರ್ಖಾನೆಯ ಪ್ಯಾಕೇಜಿಂಗ್ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಕಟೋಲ್‌ನ ಎನ್‌ಸಿಪಿ(ಎಸ್‌ಪಿ) ಶಾಸಕ ಮತ್ತು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಸ್ಫೋಟದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಕಾರ್ಖಾನೆಯು ಕಟೋಲ್ ವಿಧಾನಸಭಾ ಕ್ಷೇತ್ರದಲ್ಲಿದೆ.
ಕಾರ್ಖಾನೆಯ ಮಾಲೀಕರು ಮತ್ತು ವ್ಯವಸ್ಥಾಪಕರು ನಾಪತ್ತೆಯಾಗಿದ್ದಾರೆ. ಸ್ಫೋಟ ಸಂಭವಿಸಿದ ನಂತರ ತಕ್ಷಣಕ್ಕೆ ಯಾವುದೇ ಆಂಬ್ಯುಲೆನ್ಸ್ ಲಭ್ಯವಿರಲಿಲ್ಲ. ನಮ್ಮ ಬೆಂಬಲಿಗರು ಸಂತ್ರಸ್ತರಿಗೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು ಎಂದು ಶಾಸಕರು ತಿಳಿಸಿದ್ದಾರೆ.