ತಾನು ಜೀವಮಾನದಲ್ಲಿ ಭೇಟಿಯಾಗದ ಆರು ವರ್ಷದ ಬಾಲಕನ ಜೀವ ಉಳಿಸಲು 61 ಲಕ್ಷ ರೂಪಾಯಿ ದೇಣಿಗೆ ನೀಡಿದ 19 ವರ್ಷದ ಯುವಕ ಕ್ಯಾನ್ಸರ್ನಿಂದ ಸಾವನ್ನಪ್ಪಿದ್ದಾನೆ. 19 ವರ್ಷದ ರೈಸ್ ಲ್ಯಾಂಗ್ಫೋರ್ಡ್ ಅಮೆರಿಕಾದಲ್ಲಿ ನ್ಯುರೋಬ್ಲಾಸ್ಟೋಮಾದಿಂದ ಬಳಲುತ್ತಿದ್ದ ಆರು ವರ್ಷದ ಜಾಕೋಬ್ ಜಾನ್ಸ್ ಚಿಕಿತ್ಸೆಗಾಗಿ ನಿಧಿಯನ್ನು ಸಂಗ್ರಹಿಸಿದ್ದ ಎನ್ನಲಾಗಿದೆ.
ಪ್ರತಿಭಾನ್ವಿತ ಕ್ರೀಡಾಪಟುವಾಗಿದ್ದ ರೈಸ್ ಸ್ನೇಹಿತರೊಂದಿಗೆ ಸೇರಿ ರೇಸ್ನಲ್ಲಿ ಭಾಗಿಯಾಗಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದನು. ಇದೇ ಮೊದಲ ಬಾರಿಗೆ ರೈಸ್ಗೆ ಅನಾರೋಗ್ಯದ ಮೊದಲ ಚಿಹ್ನೆ ಕಾಣಿಸಿಕೊಂಡಿತ್ತು.
ಅಕ್ಟೋಬರ್ 2020 ರಲ್ಲಿ, ವಿವಿಧ ಪರೀಕ್ಷೆಗಳ ನಂತರ, ರೈಸ್ಗೆ ಆಸ್ಟಿಯೊಸಾರ್ಕೊಮಾ ರೋಗ ಇರುವುದು ಧೃಡಪಟ್ಟಿತ್ತು. ಈತನ ಬಲ ಸೊಂಟದಲ್ಲಿ ಗಡ್ಡೆ ಇತ್ತು. ಕ್ಯಾನ್ಸರ್ ಇರುವುದು ಧೃಡಪಟ್ಟ ಬಳಿಕ ಕಿಮೋಥೆರಪಿ ಚಿಕಿತ್ಸೆಗೆ ಒಳಗಾದನು.
ರೈಸ್ ತನ್ನ ಮೊಣಕಾಲು ಚಿಪ್ಪಿನಿಂದ ಬಲ ಸೊಂಟದವರೆಗಿನ ಎಲ್ಲಾ ಮೂಳೆಗಳನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಗಾದರು. ಇದರರ್ಥ ರೈಸ್ಗೆ ನಡೆಯಲು ಯಾವಾಗಲೂ ಎರಡು ಕೋಲುಗಳು ಅವಶ್ಯಕತೆ ಇತ್ತು.
ಇದಾದ ಬಳಿಕ ರೈಸ್ 2021ರ ಆಗಸ್ಟ್ ತಿಂಗಳಲ್ಲಿ ಮತ್ತೆ ಕಿಮೋಥೆರಪಿ ಚಿಕಿತ್ಸೆಗೆ ಒಳಗಾದರು. ಇದಾದ ಬಳಿಕ ರೈಸ್ ಕ್ಯಾನ್ಸರ್ನಿಂದ ಬಚಾವಾಗಿದ್ದಾನೆ ಎಂದೇ ಎಲ್ಲರೂ ಭಾವಿಸಿದ್ದರು. ರೈಸ್ಗೆ ಪುರ್ನಜನ್ಮ ದೊರಕಿದೆ ಎಂದು ಭಾವಿಸಿದ್ದರು. ಆದರೆ ಅಕ್ಟೋಬರ್ನಲ್ಲಿ ರೈಸ್ ಬಲಗಾಲು ಊದಿಕೊಳ್ಳಲು ಆರಂಭಿಸಿತು. ಬಲಗಾಲು ಸಾಮಾನ್ಯ ಗಾತ್ರಕ್ಕಿಂತ ಮೂರು ಪಟ್ಟು ದೊಡ್ಡದಾಯಿತು. ಡಿಸೆಂಬರ್ನಲ್ಲಿ ರೈಸ್ಗೆ ಮಾರಣಾಂತಿಕ ಕಾಯಿಲೆ ಇರುವುದು ಧೃಡಪಟ್ಟಿತ್ತು.
ರೈಸ್ ಅದೇ ಊರಿನ ಹುಡುಗನಾದ ಜಾಕೋಬ್ ಜೋನ್ಸ್ನ ಕಥೆಯನ್ನು ಓದಿದಾಗ, ಅವನು ಆರು ವರ್ಷದ ಮಗುವಿಗೆ ಮತ್ತು ಅವನ ಕುಟುಂಬಕ್ಕೆ ಸಹಾಯ ಮಾಡಲು ನಿರ್ಧರಿಸಿದನು. ಇದಾದ ಬಳಿಕ ನಿಧಿ ಸಂಗ್ರಹ ಕಾರ್ಯ ಆರಂಭಿಸಿದ ರೈಸ್ ಜಾಕೋಬ್ಗೆ 60 ಲಕ್ಷ ರೂಪಾಯಿ ಹಣ ಕೊಡಿಸಿದ್ದನು.