
ವ್ಯಕ್ತಿಯೊಬ್ಬರು ತನ್ನ ಪುತ್ರನಿಗೆ ಶಿಸ್ತಿನ ವೇಳಾಪಟ್ಟಿ ಮಾಡಿದ್ದಾರೆ. ತಮ್ಮ ಆರು ವರ್ಷದ ಮಗನಿಗೆ ಶಿಸ್ತಿನ ದಿನಚರಿಯನ್ನು ಹೇಗೆ ಹೊಂದಿಸಿದ್ದಾರೆಂದು ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅವರು ತಮ್ಮ ಮಗ ಅಬೀರ್ ಜೊತೆ ಸಹಿ ಮಾಡಿದ ಕೈಬರಹದ ವೇಳಾಪಟ್ಟಿ ಒಪ್ಪಂದದ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಒಪ್ಪಂದವು ಹುಡುಗನ ದಿನನಿತ್ಯದ ಚಟುವಟಿಕೆಗಳಿಗೆ ವಿವರವಾದ ವೇಳಾಪಟ್ಟಿಯನ್ನು ಹೊಂದಿದೆ. ಬೆಳಿಗ್ಗೆ ಎದ್ದು ಸ್ವಚ್ಛಗೊಳಿಸುವುದು, ಹಾಲು ಕುಡಿಯುವುದು ಮತ್ತು ಹೋಮ್ವರ್ಕ್ ಮಾಡುವುದನ್ನು ಒಳಗೊಂಡಿದೆ.
ಅಳುವುದು, ಕೂಗುವುದು, ಗೊಣಗುವುದು ಅಥವಾ ಜಗಳವಾಡದೆ ಕೆಲಸಗಳನ್ನು ಪೂರ್ಣಗೊಳಿಸುವುದಕ್ಕೆ ಬದಲಾಗಿ, ತಂದೆ ತನ್ನ ಮಗನಿಗೆ ಪ್ರತಿದಿನ 10 ರೂ. ನೀಡುವುದಾಗಿ ಒಪ್ಪಂದದ ಪತ್ರದಲ್ಲಿ ಬರೆದಿದ್ದಾರೆ. ಬಾಲಕ ಒಂದು ವಾರ ಪೂರ್ತಿ ಒಳ್ಳೆಯ ನಡತೆಯನ್ನು ಪಾಲಿಸಿದ್ರೆ, ಅವನಿಗೆ ಬೋನಸ್ ಆಗಿ 100 ರೂ. ಕೊಡುವುದಾಗಿ ತಿಳಿಸಿದ್ದು, ಕೊನೆಗೆ ಅಪ್ಪ-ಮಗ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಈ ಒಪ್ಪಂದ ಪತ್ರದ ಫೋಟೋ ವೈರಲ್ ಆಗಿದ್ದು, ಬಹುಮಾನ ಆಧಾರಿತ ಒಪ್ಪಂದಕ್ಕಾಗಿ ವ್ಯಕ್ತಿಯನ್ನು ನೆಟ್ಟಿಗರು ಹೊಗಳಿದ್ದಾರೆ. ತಮ್ಮ ಮಗು ಒಪ್ಪಂದದೊಂದಿಗೆ ಎಷ್ಟು ಸಂಪಾದಿಸಿದ್ದಾಗಿ ಟ್ವಿಟರ್ ಬಳಕೆದಾರರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ತಂದೆ 2000 ರೂ. ಸಂಪಾದಿಸಿದ್ದಾಗಿ ಹೇಳಿದ್ದಾರೆ. ನಂತರ ಶಾಲೆಗಳು ಪ್ರಾರಂಭವಾದವು ಹೀಗಾಗಿ ವೇಳಾಪಟ್ಟಿಯನ್ನು ಬದಲಾಯಿಸಬೇಕಾಯ್ತು ಎಂದು ತಿಳಿಸಿದ್ದಾರೆ.