ಯಾರೂ ಊಹಿಸಲಾಗದ ಬೆಳವಣಿಗೆಯಲ್ಲಿ ಬಿಜೆಪಿಯ ಕಟ್ಟಾಳು ಎಂದೇ ಪರಿಗಣಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಈಗ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಸತತ ಆರು ಬಾರಿಗೆ ಬಿಜೆಪಿಯಿಂದ ಶಾಸಕರಾಗಿದ್ದ ಅವರು ಈಗ 7ನೇ ಬಾರಿಗೆ ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಕಾಂಗ್ರೆಸ್ ಹುರಿಯಾಳಾಗಿ ಸ್ಪರ್ಧಿಸುತ್ತಿದ್ದಾರೆ.
ಪಕ್ಷದ ನಿಷ್ಠಾವಂತರಾಗಿದ್ದ ಕಾರಣಕ್ಕೆ ಯಾವುದೇ ಪ್ರತಿರೋಧ ತೋರದೆ ಬಿಜೆಪಿ ಹೈಕಮಾಂಡ್ ಮಾತನ್ನು ಅನುಸರಿಸಬಹುದೆಂಬ ನಿರೀಕ್ಷೆ ಶೆಟ್ಟರ್ ವಿಚಾರದಲ್ಲಿ ಹುಸಿಯಾಗಿದೆ. ಕಳೆದ ಹಲವು ತಿಂಗಳಿಂದ ತಮ್ಮನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿತ್ತು ಎಂಬುದನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ತಾವು ಯಡಿಯೂರಪ್ಪ ನಂತರ ಬಿಜೆಪಿಯ ಪ್ರಭಾವಿ ಲಿಂಗಾಯತ ನಾಯಕರಾಗಿದ್ದ ಕಾರಣಕ್ಕೆ ನನ್ನನ್ನು ಮೂಲೆಗುಂಪು ಮಾಡಿರಬಹುದು ಎಂದು ಹೇಳಿದ್ದಾರೆ.
ಜಗದೀಶ್ ಶೆಟ್ಟರ್ ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯತ ನಾಯಕರಾಗಿದ್ದು, ಇವರ ಕಾಂಗ್ರೆಸ್ ಸೇರ್ಪಡೆಯಿಂದ ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ಕ್ಷೇತ್ರದ ಜೊತೆಗೆ ಮತ್ತಷ್ಟು ಕ್ಷೇತ್ರಗಳ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಬಿಜೆಪಿ ವಲಯವನ್ನು ಕಾಡುತ್ತಿದೆ. ಹೀಗಾಗಿಯೇ ಡ್ಯಾಮೇಜ್ ಕಂಟ್ರೋಲ್ ಗಾಗಿ ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅಖಾಡಕ್ಕಿಳಿದಿದ್ದು, ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಹುಬ್ಬಳ್ಳಿಯಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
ಈ ಸಂದರ್ಭದಲ್ಲಿ ಬುದ್ಧಿಜೀವಿಗಳೊಂದಿಗೆ ಸಂವಾದ, ಹುಬ್ಬಳ್ಳಿ – ಧಾರವಾಡ ಮಹಾನಗರ ಹಾಗೂ ಗ್ರಾಮೀಣ ಜಿಲ್ಲಾ ಘಟಕಗಳ ಪದಾಧಿಕಾರಿಗಳು, ಮುಖಂಡರ ಜೊತೆ ಸಭೆ ನಡೆಸಲಿರುವ ಅವರು, ಪಕ್ಷದ ಉನ್ನತ ನಾಯಕರೊಂದಿಗೆ ಶೆಟ್ಟರ್ ಪಕ್ಷ ತೊರೆದಿರುವುದರಿಂದ ಲಿಂಗಾಯತ ಸಮುದಾಯದ ಮೇಲೆ ಯಾವ ಪರಿಣಾಮ ಬೀರಬಹುದು ಎಂಬ ಕುರಿತು ಚರ್ಚೆ ನಡೆಸಲಿದ್ದಾರೆ. ಜೊತೆಗೆ ಶೆಟ್ಟರ್ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕಲು ಕಾರ್ಯತಂತ್ರಗಳನ್ನು ರೂಪಿಸಲಿದ್ದಾರೆ.