ನವದೆಹಲಿ: ದೇಶದಲ್ಲಿ ಮತ್ತೆ ಕೊರೊನಾ ಸ್ಫೋಟವಾಗುತ್ತಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಆತಂಕ ಮನೆ ಮಾಡಿದೆ. ಇಲ್ಲಿ ಕಳೆದ 6 ತಿಂಗಳಲ್ಲಿಯೇ ಅತ್ಯಧಿಕ ಸೋಂಕಿತರ ಸಂಖ್ಯೆ ದಾಖಲಾಗಿದೆ.
ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ ಶೇ.38ರಷ್ಟು ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, 249 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, ಅಲ್ಲಿ ಈ ಸಮಯದಲ್ಲಿ ಓರ್ವ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ಮೂಲಕ ಮಹಾಮಾರಿಗೆ ಬಲಿಯಾದವರ ಸಂಖ್ಯೆ 25,104ಕ್ಕೆ ಏರಿಕೆ ಕಂಡಿದೆ.
ದೆಹಲಿಯಲ್ಲಿ ಈ ಹಿಂದೆ ಅತಿ ಹೆಚ್ಚಿನ ಪ್ರಕರಣಗಳು ಜೂನ್ ನಲ್ಲಿ ದಾಖಲಾಗಿದ್ದವು. ಆ ನಂತರ ಅಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯತ್ತ ಸಾಗಿತ್ತು. ಜೂ. 13ರಂದು ದೆಹಲಿಯಲ್ಲಿ 255 ಪ್ರಕರಣಗಳು ದಾಖಲಾಗಿದ್ದೇ ಕಳೆದ 6 ತಿಂಗಳಲ್ಲಿ ದಾಖಲಾದ ಗರಿಷ್ಠ ಸೋಂಕಿತರ ಸಂಖ್ಯೆ ಆಗಿತ್ತು. ಆದರೆ, ಈಗ ಮತ್ತೆ ಅಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಆತಂಕ ಮನೆ ಮಾಡಿದೆ.
ಇದರೊಂದಿಗೆ ಈಗ ದೆಹಲಿಯಲ್ಲಿ ಓಮಿಕ್ರಾನ್ ಹಾವಳಿ ಕೂಡ ವಿಪರೀತವಾಗಿದ್ದು, 67 ಪ್ರಕರಣಗಳು ದಾಖಲಾಗಿವೆ. ಈಗಾಗಲೇ ದೆಹಲಿ ಸರ್ಕಾರ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹಲವು ಕ್ಷೇತ್ರಗಳಿಗೆ ನಿರ್ಬಂಧ ವಿಧಿಸಿದೆ.