ಅಮೃತಸರ: ಮಿನಿ ಟ್ರಕ್‍ನಲ್ಲಿ ಕುಳಿತು ಸಾಗುತ್ತಿದ್ದಾಗ ಟೈರ್ ಸ್ಫೋಟಗೊಂಡ ಪರಿಣಾಮ ವಾಹನದ ಆರು ಅಡಿ ಉದ್ದದ ರಾಡ್ ದೇಹಕ್ಕೆ ಹೊಕ್ಕರೆ ಬದುಕುಳಿಯುವುದು ಉಂಟೇ ? ಕಷ್ಟಸಾಧ್ಯ ತಾನೇ, ಹೌದು. ಆದರೆ, ಹರ್ದಿಪ್ ಎಂಬ ಪಂಜಾಬಿನ ಭಟಿಂಡಾ ಜಿಲ್ಲೆಯ ಲೆಹ್ರಾ ಗ್ರಾಮದ 23 ವರ್ಷದ ಯುವಕನ ಆಯಸ್ಸು ಬಹಳ ಗಟ್ಟಿ ಇತ್ತು.
ಎದೆಗೆ ಹೊಕ್ಕಿದ್ದ ರಾಡು ವಿಪರೀತ ನೋವು ಕೊಡುತ್ತಿದ್ದರೂ ಪ್ರಜ್ಞೆ ಕಳೆದುಕೊಳ್ಳದೆಯೇ ಸ್ನೇಹಿತರ ಸಹಾಯದಿಂದ ಆಸ್ಪತ್ರೆಗೆ ಸೇರಿದ ಹರ್ದಿಪ್ ಗೆ ಬರೋಬ್ಬರು 5 ಗಂಟೆಗಳ ಕಾಲ 15 ಡಾಕ್ಟರ್ ಗಳ ತಂಡ ಶಸ್ತ್ರಚಿಕಿತ್ಸೆ ನಡೆಸಿದೆ.
ರಾಡ್ ಹೊರಕ್ಕೆ ಎಳೆದಾಗ ದೇಹದಿಂದ ಚಿಮ್ಮುವ ರಕ್ತದೋಕುಳಿಯನ್ನು ನಿಲ್ಲಿಸಿ, ರಕ್ತಸ್ರಾವ ತಡೆಯುವುದೇ ವೈದ್ಯರಿಗೆ ದೊಡ್ಡ ಸವಾಲಾಗಿತ್ತು. ಅದೃಷ್ಟದಿಂದಾಗಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಅಪಾಯದಿಂದ ಪಾರಾಗಿರುವ ಹರ್ದಿಪ್‍ಗೆ ಯಾವುದೇ ಸೋಂಕು ತಾಕದಂತೆ ಎಚ್ಚರಿಕೆ ವಹಿಸಲು ವೈದ್ಯರು ಸೂಚಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನ ನಡೆದ ಈ ಘಟನೆ ಭಟಿಂಡಾ ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.