![](https://kannadadunia.com/wp-content/uploads/2023/09/Yuvanidhi-Scheme.jpg)
ಶಿವಮೊಗ್ಗ : ಡಿಪ್ಲೋಮಾ ಮತ್ತು ಪದವೀಧರರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಉದ್ಯೋಗ ಭತ್ಯೆ ನೀಡುವ ಸರ್ಕಾರದ ಮಹತ್ವಾಕಾಂಕ್ಷಿ ಐದನೇ ಗ್ಯಾರಂಟಿ ಯುವನಿಧಿ ಯೋಜನೆಯನ್ನು ಜನವರಿ 12 ರಂದು ನಗರದ ಫ್ರೀಡಂ ಪಾರ್ಕ್ ನಲ್ಲಿ ಚಾಲನೆ ನೀಡಲಾಗುತ್ತಿದ್ದು, ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದ್ದಾರೆ.
ಯುವನಿಧಿ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಿಪ್ಲೋಮಾ ಮತ್ತು ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಉದ್ಯೋಗಭತ್ಯೆ ನೀಡುವ ಸರ್ಕಾರದ ಮಹತ್ವಾಕಾಂಕ್ಷಿ 5ನೇ ಗ್ಯಾರಂಟಿ ಯುವನಿಧಿ ಯೋಜನೆಗೆ ಜನವರಿ 12ರಂದು ನಗರದ ಫ್ರೀಡಂಪಾರ್ಕ್‍ನ ಭವ್ಯ ವೇದಿಕೆಯಲ್ಲಿ ಚಾಲನೆ ನೀಡಲಾಗುವುದು. ಅದಕ್ಕಾಗಿ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಶಿವಮೊಗ್ಗ ಹಾಗೂ ನೆರೆಯ ಜಿಲ್ಲೆಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಯುವ ವಿದ್ಯಾರ್ಥಿಗಳನ್ನು ಸಮಾರಂಭ ಸ್ಥಳಕ್ಕೆ ಕರೆತರಲು ರಸ್ತೆ ಸಾರಿಗೆ ನಿಗಮ ಮತ್ತ ಖಾಸಗಿ ಒಡೆತನದ ಸುಮಾರು 800-100ಬಸ್ಸುಗಳ ಅಗತ್ಯವಿರುವುದನ್ನು ಅಂದಾಜಿಸಲಾಗಿದೆ. ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಾಗುವವರು ಹಾಗೂ ಅಂತಿಮ ವರ್ಷದ ಸೆಮಿಸ್ಟರ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಡಿಪ್ಲೋಮಾ, ಪದವಿ ಕಾಲೇಜುಗಳ ಪ್ರಶಿಕ್ಷಣಾರ್ಥಿಗಳನ್ನು ನಿರೀಕ್ಷಿಸಲಾಗುತ್ತಿದೆ. ನಂತರ ಜಿಲ್ಲೆಯ ಗಡಿಭಾಗಕ್ಕೆ ಹೊಂದಿಕೊಂಡಂತಿರುವ ಹತ್ತಿರದ ತಾಲೂಕುಗಳ ವಿದ್ಯಾರ್ಥಿಗಳನ್ನು ಕರೆತರಲು ವಾಹನ ಸೌಲಭ್ಯ ಒದಗಿಸಲಾಗುವುದು. ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯಿಂದಲೇ ಬಹುಸಂಖ್ಯೆಯ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ ಎಂದರು.
ಈಗಾಗಲೇ ಯುವನಿಧಿ ಯೋಜನೆಯ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ರಾಜ್ಯದ ಎಲ್ಲಾ ಫಲಾನುಭವಿಗಳಿಗೂ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮೊಬೈಲ್ ಸಂದೇಶ ಕಳುಹಿಸಲು ಉದ್ದೇಶಿಸಲಾಗಿದೆ. ವಿವಿಧ ಸ್ಥಳಗಳಿಂದ ಕಾರ್ಯಕ್ರಮಕ್ಕೆ ಹೊರಡುವ ವಿದ್ಯಾರ್ಥಿಗಳನ್ನು ನೋಡಿಕೊಳ್ಳಲು ಪ್ರತಿ ಬಸ್ ಒಂದಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ನಿಯೋಜಿತ ಅಧಿಕಾರಿ-ಸಿಬ್ಬಂಧಿಗಳ ಯೋಗಕ್ಷೇಮ ಮತ್ತು ಜವಾಬ್ದಾರಿ ತೆಗೆದುಕೊಳ್ಳುವಂತೆ ಅವರು ಸೂಚಿಸಿದರು.