ಬೆಂಗಳೂರು: ರಾಜ್ಯ ಪಠ್ಯಕ್ರಮದ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದಲ್ಲಿ ನಡೆಸಿರುವ ಪರೀಕ್ಷೆಗಳಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಮುಂದಿನ ತರಗತಿಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸೋಮವಾರ ಆದೇಶ ಹೊರಡಿಸಿದ್ದಾರೆ. 5, 8 ಮತ್ತು 9ನೇ ತರಗತಿ ಮೌಲ್ಯಾಂಕನ ಫಲಿತಾಂಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ಈ ಹಿಂದೆ ನಡೆಸಿದ್ದ ಎಫ್ಎ -1, 2, 3, 4 ಮತ್ತು ಎಸ್ಎ -1ರ ಮೌಲ್ಯಾಂಕನ ಆಧರಿಸಿ ಫಲಿತಾಂಶ ಪ್ರಕಟಿಸುವಂತೆ ಶಿಕ್ಷಣ ಇಲಾಖೆ ಎಲ್ಲಾ ಶಾಲೆಗಳಿಗೆ ಸೂಚನೆ ನೀಡಿದೆ. ಈ ಮೂಲಕ 2024 -25 ನೇ ಸಾಲಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಇದ್ದ ತೊಡಕಿಗೆ ತಾತ್ಕಾಲಿಕ ಪರಿಹಾರ ನೀಡಲಾಗಿದೆ.
ಇದರಿಂದಾಗಿ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗೆ ಪ್ರವೇಶಕ್ಕೆ ಇದ್ದ ಅಡ್ಡಿ ನಿವಾರಣೆಯಾಗಿದೆ. ಮೌಲ್ಯಾಂಕನ ಫಲಿತಾಂಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ ಹಿನ್ನೆಲೆಯಲ್ಲಿ ಅತಂತ್ರರಾಗಿದ್ದ ವಿದ್ಯಾರ್ಥಿಗಳು, ಪೋಷಕರು ನಿರಾಳರಾಗಿದ್ದಾರೆ.