ಭಾರ್ತಿ ಏರ್‌ಟೆಲ್ ಈಗಾಗಲೇ 8 ನಗರಗಳಲ್ಲಿ 5G ಸೇವೆಗಳನ್ನು ಪ್ರಾರಂಭಿಸಿದೆ. ನೆಟ್ವರ್ಕ್ 5ಜಿಗೆ ಬದಲಾಗಿದ್ದರೂ ಸದ್ಯ ಅಸ್ತಿತ್ವದಲ್ಲಿರುವ ಏರ್‌ಟೆಲ್ 4G ಸಿಮ್ ಹೊಂದಿರುವ ಬಳಕೆದಾರರು ಅದನ್ನು ಬದಲಾಯಿಸುವ ಅಗತ್ಯವಿಲ್ಲ. ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಸಿಲಿಗುರಿ, ನಾಗ್ಪುರ ಮತ್ತು ವಾರಣಾಸಿಯ ಗ್ರಾಹಕರಿಗೆ ಹಂತ ಹಂತವಾಗಿ ಏರ್‌ಟೆಲ್ 5G ಪ್ಲಸ್ ಸೇವೆಗಳನ್ನು ಒದಗಿಸುವುದಾಗಿ ಕಂಪನಿ ಹೇಳಿದೆ.
ಪ್ರಸ್ತುತ ವೇಗಕ್ಕಿಂತ 20 ರಿಂದ 30 ಪಟ್ಟು ಹೆಚ್ಚು ಸ್ಪೀಡ್ ಇಂಟರ್ನೆಟ್ ಹಾಗೂ ನೆಟ್ವರ್ಕ್ ಏರ್ಟೆಲ್ ಬಳಕೆದಾರರಿಗೆ ಲಭ್ಯವಾಗಲಿದೆಯಂತೆ. ಜೊತೆಗೆ ಕ್ಲಿಯರ್ ವಾಯ್ಸ್ ಕಾಲ್, ಸೂಪರ್ ಫಾಸ್ಟ್ ಕಾಲಿಂಗ್ ಸೇವೆಯನ್ನು ಕೂಡ ನೀಡುವುದಾಗಿ ಏರ್ಟೆಲ್ ಭರವಸೆ ನೀಡಿದೆ.
5G ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರುವ ಗ್ರಾಹಕರು ಈಗಾಗ್ಲೇ ಅಸ್ತಿತ್ವದಲ್ಲಿರುವ ಡೇಟಾ ಯೋಜನೆಗಳಲ್ಲಿ ಹೆಚ್ಚಿನ ವೇಗದ ಏರ್‌ಟೆಲ್ 5G ಪ್ಲಸ್ ಇಂಟರ್ನೆಟ್ ಅನ್ನು ಪಡೆಯಬಹುದು. ಸದ್ಯ ಇರುವ 4ಜಿ ಸಿಮ್ ಹಾಗೂ 5ಜಿ ಮೊಬೈಲ್‌ನಲ್ಲಿ ಇದು ಕಾರ್ಯನಿರ್ವಹಿಸಲಿದೆ. ಏರ್‌ಟೆಲ್ 5G ಪ್ಲಸ್ನಲ್ಲಿ ಹೈ-ಡೆಫಿನಿಷನ್ ವೀಡಿಯೊ ಸ್ಟ್ರೀಮಿಂಗ್, ಗೇಮಿಂಗ್, ಮಲ್ಟಿಪಲ್ ಚಾಟಿಂಗ್, ಫೋಟೋಗಳ ತ್ವರಿತ ಅಪ್‌ಲೋಡ್ ಮತ್ತು ಸೂಪರ್‌ಫಾಸ್ಟ್ ಎಕ್ಸೆಸ್ ಸೇರಿದಂತೆ ಅನೇಕ ಸೇವೆಗಳು ಲಭ್ಯವಿವೆ.
ಭಾರ್ತಿ ಏರ್‌ಟೆಲ್ 5G-ಸಂಪರ್ಕಿತ ಆಂಬ್ಯುಲೆನ್ಸ್ ಅನ್ನು ತುರ್ತು ಸಂದರ್ಭಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಪರಿವರ್ತಿಸುವುದು ಹಾಗೂ ಸ್ಮಾರ್ಟ್ ಕೃಷಿ ಪರಿಹಾರಗಳನ್ನು ಅಭಿವೃದ್ಧಿಪಡಿಸಿದ್ದು, ಅದನ್ನು ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಪ್ರಸ್ತುತಪಡಿಸಿತ್ತು.