ಬೆಂಗಳೂರು: ರಿಲಯನ್ಸ್ ಫೌಂಡೇಶನ್ ವತಿಯಿಂದ ಪ್ರತಿಭಾನ್ವಿತ ಪದವಿ ವಿದ್ಯಾರ್ಥಿಗಳಿಗೆ ಉತ್ತೇಜಿಸಲು ನೀಡುವ ವಿದ್ಯಾರ್ಥಿವೇತನಕ್ಕೆ ರಾಜ್ಯದ 590 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
2024-25ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ದೇಶಾದ್ಯಂತ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುವ ಒಂದು ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ಇವರಲ್ಲಿ 1300 ಶಿಕ್ಷಣ ಸಂಸ್ಥೆಗಳಿಂದ 5 ಸಾವಿರ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ ಕರ್ನಾಟಕ ಸಿಂಹ ಪಾಲು ಪಡೆದುಕೊಂಡಿದೆ.
ಆಯ್ಕೆಯಾದ ಶೇಕಡ 70ರಷ್ಟು ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷ ರೂ. ಗಿಂತ ಕಡಿಮೆ ಇದೆ. ಈ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ, ಹಾಸ್ಟೆಲ್ ವೆಚ್ಚ ಮತ್ತು ಇತರೆ ಶೈಕ್ಷಣಿಕ ಶುಲ್ಕವನ್ನು ಒಳಗೊಂಡಂತೆ 2 ಲಕ್ಷ ರೂ. ವಿದ್ಯಾರ್ಥಿ ವೇತನ ಸಿಗಲಿದೆ ಎಂದು ರಿಲಯನ್ಸ್ ಫೌಂಡೇಶನ್ ತಿಳಿಸಿದೆ.
ಪ್ರತಿ ವರ್ಷ 5100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. 1996ರಲ್ಲಿ ಈ ವಿದ್ಯಾರ್ಥಿ ವೇತನ ಯೋಜನೆ ಆರಂಭವಾಗಿದ್ದು, 2020ರ ವೇಳೆಗೆ ದೇಶಾದ್ಯಂತ 28,000 ವಿದ್ಯಾರ್ಥಿಗಳನ್ನು ತಲುಪಿದೆ. ಮುಂದಿನ 10 ವರ್ಷಗಳಲ್ಲಿ ಇನ್ನೂ 50 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ರಿಲಯನ್ಸ್ ಫೌಂಡೇಶನ್ ಸ್ಥಾಪಕಿ ನೀತಾ ಅಂಬಾನಿ ಹೇಳಿದ್ದಾರೆ.