ಇವತ್ತು ನಟ ಸಲ್ಮಾನ್ ಖಾನ್‌ಗೆ ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳ ಪ್ರೀತಿಯ ಸಲ್ಲು 57ನೇ ಬರ್ತಡೇ ಆಚರಿಸಿಕೊಳ್ತಿದ್ದಾರೆ. ಬಾಲಿವುಡ್‌ನಲ್ಲಿ ಸಾಕಷ್ಟು ಹೆಸರು ಮಾಡಿರೋ ಸಲ್ಮಾನ್ ಖಾನ್‌ಗೆ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ.
ಹಲವು ಸೂಪರ್ ಹಿಟ್ ಚಿತ್ರಗಳ ಮೂಲಕ ಸಲ್ಮಾನ್ ಮನೆಮಾತಾಗಿದ್ದಾರೆ. ಇದರ ಜೊತೆಗೆ 57ರ ಹರೆಯದಲ್ಲೂ ಸಲ್ಲು ಇಷ್ಟೊಂದು ಫಿಟ್ & ಫೈನ್ ಆಗಿರೋದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
ಸಲ್ಮಾನ್ ಖಾನ್‌ರ ಫಿಟ್ನೆಸ್ ಸೀಕ್ರೆಟ್ ಏನಿರಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಸಲ್ಲು ಆಹಾರ ಕ್ರಮ, ವ್ಯಾಯಾಮ ಎಲ್ಲವೂ ಯಾವ ರೀತಿಯಿದೆ ಅನ್ನೋದನ್ನು ನೋಡೋಣ. ಸಲ್ಮಾನ್ ಖಾನ್ ತಮ್ಮ ಆಹಾರ ಮತ್ತು ಪಾನೀಯದ ಬಗ್ಗೆ ವಿಶೇಷ ಗಮನ ಹರಿಸುತ್ತಾರೆ. ಬೆಳಗಿನ ಉಪಾಹಾರಕ್ಕೆ ಮೊಟ್ಟೆಯ ಬಿಳಿಭಾಗ ಮತ್ತು ಕಡಿಮೆ ಕೊಬ್ಬಿನ ಹಾಲನ್ನು ತೆಗೆದುಕೊಳ್ಳುತ್ತಾರೆ.
ದೇಸಿ ಮತ್ತು ಇಟಾಲಿಯನ್ ಫುಡ್ ಫೇವರಿಟ್
ಸಲ್ಮಾನ್ ಖಾನ್ ತಾವೊಬ್ಬ ತಿಂಡಿಪೋತ ಅನ್ನೋದನ್ನ ಅನೇಕ ಬಾರಿ ಹೇಳಿಕೊಂಡಿದ್ದಾರೆ. ರುಚಿರುಚಿಯಾದ ತಿನಿಸುಗಳೆಂದ್ರೆ ಸಲ್ಲುಗೆ ಬಹಳ ಇಷ್ಟವಂತೆ. ಭಾಯಿಜಾನ್ ದೇಸಿ ಮತ್ತು ಇಟಾಲಿಯನ್ ಖಾದ್ಯಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಸಕ್ಕರೆ ಸೇರಿದಂತೆ ಸಿಹಿ ತಿನಿಸುಗಳು ಮತ್ತು ಸಂಸ್ಕರಿಸಿದ ಆಹಾರವನ್ನು ಸಲ್ಮಾನ್ ತಿನ್ನುವುದಿಲ್ಲ.
ಸಲ್ಮಾನ್ ಖಾನ್ ತಮ್ಮ ದೇಹದ ಮೆಟಬಾಲಿಸಮ್ ಅನ್ನು ಹೆಚ್ಚಿಸಿಕೊಳ್ಳಲು ದಿನಕ್ಕೆ 5-6 ಬಾರಿ ಆಹಾರವನ್ನು ಸೇವಿಸುತ್ತಾರೆ. ಮಧ್ಯಾಹ್ನದ ಊಟಕ್ಕೆ ಚಪಾತಿ ಅಥವಾ ರೊಟ್ಟಿ, ಸುಟ್ಟ ತರಕಾರಿಗಳು ಮತ್ತು ಗ್ರೀನ್ ಸಲಾಡ್ ತಿನ್ನುತ್ತಾರೆ. ಹೊಟ್ಟೆ ಬಿರಿಯುವಷ್ಟು ಊಟ ಮಾಡುವುದಿಲ್ಲ. ಲೈಟ್ ಫುಡ್ ಮಾತ್ರ ತೆಗೆದುಕೊಳ್ಳುತ್ತಾರೆ. ಸಂಜೆಯ ಸ್ನಾಕ್ಸ್‌ಗೆ ಸಾಮಾನ್ಯವಾಗಿ ಸಲ್ಲು ಬಾದಾಮಿ ತಿನ್ನಲು ಇಷ್ಟಪಡ್ತಾರೆ. ಜೊತೆಗೆ ಕೆಲವೊಂದು ಆರೋಗ್ಯಕರ ಸ್ನಾಕ್‌ಗಳನ್ನೇ ಆಯ್ದುಕೊಳ್ತಾರೆ.
ಸಲ್ಮಾನ್ ಸಾಮಾನ್ಯವಾಗಿ ರಾತ್ರಿಯ ಊಟಕ್ಕೆ 2 ಮೊಟ್ಟೆ, ಮೀನು ಅಥವಾ ಚಿಕನ್ ಮತ್ತು ಸೂಪ್ ತೆಗೆದುಕೊಳ್ಳುತ್ತಾರೆ. ಇದಲ್ಲದೆ ಸಲ್ಮಾನ್ ಜಿಮ್‌ನಲ್ಲಿ ವರ್ಕೌಟ್‌ಗೂ ಮುನ್ನ ಅಥವಾ ನಂತರ ಹಣ್ಣು ಹಾಗೂ ಪ್ರೋಟೀನ್ ಶೇಕ್ ಸೇವಿಸ್ತಾರೆ. ಕೆಲವೊಮ್ಮೆ ಓಟ್ಸ್ ಮತ್ತು ಪ್ರೋಟೀನ್ ಬಾರ್‌ಗಳನ್ನೂ ತಿನ್ನುತ್ತಾರೆ.
ಕಟ್ಟುನಿಟ್ಟಾದ ಆಹಾರ ಕ್ರಮ ಮತ್ತು ನಿಯಮಿತ ವ್ಯಾಯಾಮದ ಸಹಾಯದಿಂದ ಸಲ್ಮಾನ್ ಖಾನ್ 57ನೇ ವಯಸ್ಸಿನಲ್ಲೂ ಕಟ್ಟುಮಸ್ತಾದ ದೇಹವನ್ನು ಹೊಂದಿದ್ದಾರೆ ಜೊತೆಗೆ ಆರೋಗ್ಯವಾಗಿದ್ದಾರೆ.