
ಬೇರೆಯವರ ಮಗುವನ್ನು ತಾನು ಹೊಟ್ಟೆಯಲ್ಲಿ ಇಟ್ಟುಕೊಂಡು ಜನ್ಮ ನೀಡುವ ಬಾಡಿಗೆ ತಾಯ್ತನ ಶುರುವಾಗಿ ಹಲವು ವರ್ಷಗಳೇ ಕಳೆದಿವೆ. ಇಂಥ ಘಟನೆಗಳಲ್ಲಿ ಸಾಕಷ್ಟು ರೋಚಕ ಎನಿಸುವ ಘಟನೆಗಳೂ ನಡೆಯುತ್ತವೆ. ಅಂಥದ್ದರಲ್ಲಿ ಒಂದು ಇದೀಗ ಅಮೆರಿಕದಿಂದ ವರದಿಯಾಗಿದ್ದು, ಕುತೂಹಲ ಎನಿಸುವಂತಿದೆ.
ಈ ಘಟನೆಯಲ್ಲಿ ಅಜ್ಜಿಯೂ ಅವಳೇ, ಅಮ್ಮನೂ ಅವಳೇ. ಇಂಥದ್ದೊಂದು ಘಟನೆ ನಡೆದಿರುವುದು ಯುನೈಟೆಡ್ ಸ್ಟೇಟ್ಸ್‌ನ ಉತಾಹ್‌ನಲ್ಲಿ. ಸೊಸೆಯ ಗರ್ಭಕೋಶದಲ್ಲಿ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಆಕೆಯ ಗರ್ಭಕೋಶವನ್ನು ತೆಗೆಯಬೇಕಾಗಿ ಬಂತು. ಈ ಹಿನ್ನೆಲೆಯಲ್ಲಿ 56 ವರ್ಷದ ಅತ್ತೆಯೇ ಆಕೆಯ ಮಗುವಿಗೆ ಜನ್ಮ ನೀಡಿದ್ದಾಳೆ.
ಜೆಫ್ ಹಾಕ್ ಅವರ 56 ವರ್ಷದ ತಾಯಿ ನ್ಯಾನ್ಸಿ ಹಾಕ್ ಎಂಬ ಸೊಸೆಯ ಮಗುವನ್ನು ಗರ್ಭದಲ್ಲಿ ಇಟ್ಟುಕೊಂಡು ಜನ್ಮ ನೀಡಿದ್ದಾಳೆ. ಈಕೆಗೆ ಈಗಾಗಲೇ ಐದು ಮಕ್ಕಳಿದ್ದು, ಇದೀಗ ಆರನೆಯ ಮಗುವಿನ ತಾಯಿ ಹಾಗೂ ಅಜ್ಜಿಯಾಗಿದ್ದಾಳೆ. ಇದೊಂದು ರೀತಿಯಲ್ಲಿ ರೋಚಕ ಅನುಭವ ನೀಡಿರುವುದಾಗಿ ನ್ಯಾನ್ಸಿ ಹೇಳಿಕೆ ನೀಡಿದ್ದಾಳೆ.