ಹೆಡ್ಲೈಟ್ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದದಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆಯ ಜವಾನ ಕಪಾಳ ಮೋಕ್ಷ ಮಾಡಿದ ಪರಿಣಾಮ ಕುಸಿದು ಬಿದ್ದಿದ್ದ 54 ವರ್ಷದ ವ್ಯಕ್ತಿಯು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮಹಾರಾಷ್ಟ್ರದ ದಕ್ಷಿಣ ನಾಗ್ಪುರದಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶುಕ್ರವಾರ ಸಂಜೆ ವೇಳೆ ಈ ಘಟನೆ ಸಂಭವಿಸಿದ್ದು ಮೃತ ವ್ಯಕ್ತಿಯನ್ನು ಮುರುಳೀಧರ್ ರಾಮರಾವ್ ನೆವಾರೆ ಎಂದು ಗುರುತಿಸಲಾಗಿದೆ. ನೆವಾರೆ ವಾಥೋಡಾ ಪೊಲೀಸ್ ಠಾಣಾ ವ್ಯಾಪ್ತಿಯ ಮಾತಾ ಮಂದಿರ ಪ್ರದೇಶದಲ್ಲಿ ಕಾರು ನಿಲ್ಲಿಸುತ್ತಿದ್ದ ಸಂದರ್ಭದಲ್ಲಿ ಈ ಗಲಾಟೆ ಉಂಟಾಗಿತ್ತು ಎನ್ನಲಾಗಿದೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಸ್ಥಳೀಯ ನಿವಾಸಿಯಾದ ನೆವಾರೆ ಕಾರು ಓಡಿಸುತ್ತಿದ್ದ ಎಸ್ಆರ್ಪಿಎಫ್ ಜವಾನ ನಿಖಿಲ್ ಗುಪ್ತಾರ ಕಾರಿನ ಹೆಡ್ಲೈಟ್ ಮುಖಕ್ಕೆ ನೇರವಾಗಿ ಬೀಳುತ್ತಿದ್ದ ಕಾರಣ ಅದನ್ನು ಅಡ್ಜಸ್ಟ್ ಮಾಡುವಂತೆ ವಿನಂತಿ ಮಾಡಿದ್ದಾರೆ. ಗಾಂಧಿಭಾಗ್ ನಿವಾಸಿಯಾಗಿರುವ ಗುಪ್ತಾ ತನ್ನ ಸಹೋದರಿಯನ್ನು ಭೇಟಿ ಮಾಡಲು ಇಲ್ಲಿಗೆ ಆಗಮಿಸಿದ್ದರು ಎನ್ನಲಾಗಿದೆ. ಇದೇ ಹೆಡ್ಲೈಟ್ ವಿಚಾರಕ್ಕೆ ಇಬ್ಬರಿಗೂ ವಾಗ್ವಾದ ಆರಂಭಗೊಂಡಿದೆ.
ಕೋಪಗೊಂಡ ಗುಪ್ತಾ, ನೆವಾರೆಗೆ ಕಪಾಳ ಮೋಕ್ಷ ಮಾಡಿದ್ದಾರೆ. ಹೊಡೆತದ ರಭಸಕ್ಕೆ ನೆವಾರೆ ಅಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗೆಂದು ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಭಾನುವಾರ ಬೆಳಗ್ಗೆ ವೇಳೆಗೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಆಸ್ಪತ್ರೆಗೆ ಬರುವ ವೇಳೆಯಲ್ಲಿಯೇ ಅವರ ಸ್ಥಿತಿ ಗಂಭೀರವಾಗಿತ್ತು. ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಅಂತಾ ಸರ್ಕಾರಿ ಆಸ್ಪತ್ತೆ ಡೀನ್ ಡಾ, ರಾಜ್ ಗೆಜ್ಜಿಯೆ ಹೇಳಿದ್ದಾರೆ. ಆರೋಪಿ ನೆವಾರೆ ವಿರುದ್ಧ ಐಪಿಸಿ ಸೆಕ್ಷನ್ 3034ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.